jump to navigation

ಜಗತ್ತಿನಲ್ಲಿ ಯಾವುದು ಸುಂದರ? ನವೆಂಬರ್ 15, 2007

Posted by Bala in ಬದುಕು.
Tags:
add a comment

ಜಗತ್ತಿನಲ್ಲಿ ಯಾವುದು ಸುಂದರ? ಒಮ್ಮೆ ನನ್ನ ಸ್ನೇಹಿತನೊಬ್ಬ ಈ ಪ್ರಶ್ನೆಯನ್ನು ಕೇಳಿದ್ದ, ಅದಕ್ಕೆ ನಾನು ನಿಸರ್ಗ ಎಂದುತ್ತರಿಸಿದೆ. ಆದಕ್ಕೆ ಮುಗುಳ್ನಗುತ್ತಾ (ಅಂದರೆ ನಾನು ಹೇಳಿದ್ದು ಸರಿಯಲ್ಲ ಎಂಬ ಭಾವನೆಯೊಂದಿಗೆ) ಆತ ಹೇಳಿದ ಇಲ್ಲಾ ಪ್ರಪಂಚದಲ್ಲಿ ಹೆಣ್ಣಿನ ದೇಹವೇ ಅತಿ ಸುಂದರ. ನಾನು ಹೇಳಿದೆ, ನೀನೊಬ್ಬ ಹುಡುಗ ಅದಕ್ಕೆ ನಿನಗೆ ಹೆಣ್ಣಿನ ದೇಹ ಸುಂದರ ಎನಿಸುತ್ತದೆ, ಇದೇ ಪ್ರೆಶ್ನೆಯನ್ನು ಯಾವುದಾದರೂ ತುಂಟಹುಡುಗಿಗೆ ಕೇಳಿದ್ದರೆ ಬೇರೆಯದೇ ಉತ್ತರ ಬರುತಿತ್ತೇನೊ, ಅಲ್ಲದೇ ಸಾಮಾನ್ಯವಾಗಿ ನಿಸರ್ಗವನ್ನು  ಹೆಣ್ಣಿಗೆ ಹೋಲಿಸುತ್ತಾರೆ, ಹಾಗಾಗಿ ನನ್ನ ಮೊದಲನೇ ಉತ್ತರವಾದ ನಿಸರ್ಗ ಹೆಣ್ಣನ್ನೂ ಸೇರಿಸಿಕೊಳ್ಳುತ್ತದೆ ಎಂದು ನನ್ನ ವಾದವನ್ನು ಮುಂದಿಟ್ಟೆ. ಏನೇ ವಾದಿಸಿದರು ’ವಾದಿರಾಜ’ನಾದ ನನ್ನ ಸ್ನೇಹಿತ ತನ್ನ ಪಟ್ಟು ಬಿಡುವಂತೆ ಕಾಣಲಿಲ್ಲ.

ಒಮ್ಮೆ ಸರ್.ಎಮ್. ವಿಶ್ವೇಶರಯ್ಯನವರು ಜೋಗದ ಜಲಪಾತವನ್ನು ನೊಡಲು ಹೋಗಿದ್ದರಂತೆ. ಅವರ ಸುತ್ತ ಇದ್ದವರು ಆ ಜಲಪಾತದ ಸೌಂದರ್ಯವನ್ನು ವರ್ಣಿಸುತಿದ್ದರೆ, ವಿಶ್ವೇಶರಯ್ಯನವರು ಚಿಂತಿತರಾದಂತೆ ಕಂಡಿತಂತೆ, ಯಾರೊ ಒಬ್ಬರು ಕಾರಣ ಕೇಳಿದಾಗ ವಿಶ್ವೇಶರಯ್ಯನವರು ಹೇಳಿದರಂತೆ, ಇಲ್ಲಿ ಎಷ್ಟೋಂದು ಶಕ್ತಿ ವ್ಯರ್ಥವಾಗುತ್ತಿದೆಯಲ್ಲ ಎಂದು ಚಿಂತೆಯಾಗಿದೆ ಎಂದು ಉತ್ತರಿಸಿದರಂತೆ. ಜಲಪಾತ ಮೂಲತಃ ಇಂಜಿನಿಯರ್ ಆದ ವಿಶ್ವೇಶರಯ್ಯನವರಿಗೆ ಶಕ್ತಿ ಉತ್ಪಾದನಾ ಕೇಂದ್ರವಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಯಾರೊ ಹೇಳಿದಂತೆ ಸೌಂದರ್ಯ ನೊಡುಗನ ಕಣ್ಣಿನಲ್ಲಿರುತ್ತದೆ. ಒಬ್ಬನಿಗೆ ಸುಂದರವಾದದ್ದು ಮತ್ತೊಬ್ಬನಿಗೆ ಸುಂದರವಾಗಿರಬೇಕಂತೇನಿಲ್ಲ.

ಸಾಮಾನ್ಯವಾಗಿ ನಾವೆಲ್ಲರೂ ಕೆಲವನ್ನು ಸುಂದರ ಎಂದು ನಂಬಿಬಿಟ್ಟಿರುತ್ತೇವೆ, ಯಾಕೆಂದರೆ ನಮ್ಮ ನೆಚ್ಚಿನ ಕವಿ ಅಥವಾ ಬರಹಗಾರ ಅಥವಾ ಪ್ರಸಿದ್ದ ವ್ಯಕ್ತಿ ಯಾವುದೋ ವಸ್ತುವನ್ನು  ಸುಂದರ ಎಂದು ಹೊಗಳಿದ್ದರೆ ಸಾಕು, ಆತನ/ಆಕೆಯ  ರುಚಿಯನ್ನು  ಸಂಪೂರ್ಣ ನಂಬಿರುವ ನಮ್ಮಂತವರು, ಆ ವಸ್ತುವಿನಲ್ಲಿ ನಾವು ವಸ್ತುತಃ ಸೌಂದರ್ಯವನ್ನು ಕಾಣದಿದ್ದರೂ ಅದು ಸುಂದರ ಎಂದು ನಂಬಿರುತ್ತೇವೆ. ಸಾಮಾನ್ಯ ಸೂರ್ಯೋದಯವನ್ನು ಎಲ್ಲ ಕವಿಗಳೂ ವರ್ಣಿಸಿದ್ದಾರೆ, ನಾವು ಒಮ್ಮೆ ಬೇಗ ಎದ್ದು ಮನೆ ಮಹಡಿ ಮೇಲೆ ಹೋಗಿ ಆಗತಾನೆ ಉದಯಿಸುತ್ತಿರುವ ಸೂರ್ಯನನ್ನು ನೋಡಿ ವಾವ್ ಎಂತ ಸುಂದರ ಸೂರ್ಯೋದಯ ಎಂದು ಉದ್ಗಾರ ತೆಗೆಯುತ್ತೇವೆ, ಇದು ಬಾಯಿಂದ ಬಂದ ವಾಕ್ಯವೇ ಹೊರತು ಮನಸ್ಸಿನ ಆಳದಿಂದ ಬಂದದ್ದಲ್ಲ. ಅದು ನಿಜವಾಗಿ ಮನಸ್ಸಿನ ಆಳದಿಂದ ಬಂದಿದ್ದರೆ ಆಗ ಈ ವಾಕ್ಯ ಅರ್ಥಪೂರ್ಣವಾದದ್ದು.

ಜಗತ್ತಿನಲ್ಲಿ ಯಾವುದು ಸುಂದರ? ಎಂಬ ಪ್ರಶ್ನೆಗೆ ಈಗ ನನ್ನ ಉತ್ತರ, ಯಾವ ವಸ್ತುವನ್ನು  ನಾವು ನೊಡಿದಾಗ ಅದು ನಮ್ಮ ಅಂತರಾಳದಲ್ಲಿ ಆನಂದವನ್ನು ಉಂಟುಮಾಡುವುದೊ ಅದೇ ಸುಂದರ. ಇದನ್ನೇ ಮುಂದುವರೆಸಿ ಯಾರ ಮನಸ್ಸು  ಮುಕ್ತವಾಗಿಯೂ ಹಾಗು ಪ್ರಶಾಂತವಾಗಿಯೂ ಇರುತ್ತದೋ ಅಂತವರಿಗೆ ಜಗತ್ತಿನ ಎಲ್ಲಾ ವಸ್ತುಗಳಲ್ಲೂ ಸೌಂದರ್ಯಕಾಣುತ್ತದೆ.