ಮೌಲ್ಯಗಳ ಅವನತಿ – ಒಂದು ವಿವೇಚನೆ ನವೆಂಬರ್ 30, 2007
Posted by Bala in ಬದುಕು.Tags: ಮೌಲ್ಯಗಳ ಅವನತಿ
6 comments
ಯಾವುದೇ ಕಾಲದ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, ಅಲ್ಲಿ ನಮಗೆ ಒಂದು ಕಡೆ, ಆ ಕಾಲದ ಮೌಲ್ಯಗಳನ್ನು ಅದರ ಹಿಂದಿನ ಕಾಲದ ಮೌಲ್ಯಗಳಿಗೆ ಹೋಲಿಸಿ, ಮೌಲ್ಯಗಳ ಅವನತಿ ಯಾಗಿದೆ ಎಂಬ ಒಂದು ಲೇಖನ ಕಣ್ಣಿಗೆ ಬಿದ್ದೇ ಬೀಳುತ್ತದೆ. ಹಾಗೆ ಕಾಲ ಕೆಟ್ಟುಹೋಯಿತು ಎಂಬ ಹೇಳಿಕೆ ಸರ್ವೇ ಸಾಮಾನ್ಯವಾಗಿ ಎಲ್ಲ ಕಾಲದಲ್ಲೂ ಕೇಳಿ ಬರುವ ಮಾತು. ಈಗಿನ ಸಮಾಜದಲ್ಲಿ ಮೌಲ್ಯಗಳ ಅವನತಿಯಾಗುತ್ತಿದೆಯೆ? ಕಾಲ ನಿಜವಾಗಿಯು ಕೆಟ್ಟುಹೊಗಿದೆಯೆ? ಎಂಬ ಪ್ರೆಶ್ನೆಗೆ ಉತ್ತರ ಹೌದು, ಇಲ್ಲ.
ಈಗ ಒಂದು ಸನ್ನಿವೇಶವನ್ನು ಗಮನಿಸೊಣ ಒಬ್ಬ ಪ್ರಾಮಾಣಿಕ ನಾದ ಲೋಕಾಯುಕ್ತನು ಒಬ್ಬ ಕುಖ್ಯಾತ ಲಂಚಕೊರನನ್ನು ಆಧಾರ ಸಮೇತವಾಗಿ ಹಿಡಿದರು. ಈ ಸನ್ನಿವೇಶದಲ್ಲಿ ನೀವು ಲಂಚಕೋರನನ್ನು ಅವನ ಮೌಲ್ಯಗಳನ್ನು ನೋಡಿದರೆ, ಹೌದು ಈಗಿನ ಸಮಾಜದಲ್ಲಿ ಮೌಲ್ಯಗಳ ಅವನತಿಯಾಗಿದೆ. ಈ ಲಂಚಕೋರ ಸಮಾಜದ ಒಂದು ಭಾಗಕ್ಕೆ ಮಾದರಿಯಾಗಿದ್ದಿರಬಹುದು. ಆದರೆ ಲಂಚ ಯಾವ ಕಾಲದಲ್ಲಿರಲಿಲ್ಲ. ಚಾಣಕ್ಯ ತನ್ನ ಅರ್ಥಶಾಸ್ತ್ರದಲ್ಲಿ ಒಂದು ಮಾತನ್ನು ಹೇಳುತ್ತಾನೇ. ಮೀನು ನೀರಿನಲ್ಲೇ ಇರುವುದರಿಂದ ಅದು ನೀರು ಕುಡಿಯದೇ ಇರುವಂತೆ ಎಚ್ಚರವಿರ ಬೇಕು ಅಂದರೆ ಹಣದ ಲೆಕ್ಕಾಚಾರದಲ್ಲಿರುವವನು ಹಣವನ್ನು ದುರುಪಯೊಗ ಮಾಡಿಕೊಳ್ಳಬಹುದು ಆದ್ದರಿಂದ ಈ ವಿಚಾರದಲ್ಲಿ ಯಾವಾಗಲೂ ಎಚ್ಚರಿಕೆಯಿಂದಿರಬೇಕು ಎನ್ನುತ್ತಾನೆ. ಹೀಗೆ ಲಂಚ ಮೊಸ ವಂಚನೆ ಎಲ್ಲ ಮನುಷ್ಯನ ಇತಿಹಾಸದಷ್ಟೇ ಹಳೆಯದು. ಇಲ್ಲಿ ಲಂಚವನ್ನು ಸಮರ್ಥಿಸುತ್ತಿಲ್ಲಾ, ಆದರೆ ಅದು ಈ ಸಮಾಜದಲ್ಲಿ ಮಾತ್ರ ಸೀಮಿತವಾಗಿರಲಿಲ್ಲ ಎಂಬುದನ್ನು ವಿವರಿಸಲು ಪ್ರಯತ್ನಿಸುತಿದ್ದೇನೆ.
ಮೇಲೆ ವಿವರಿಸಿದ ಸನ್ನಿವೇಶದ ಇನ್ನೊಂದು ಮುಖ ಮೌಲ್ಯಾಧಾರಿತವಾದ ಲೋಕಾಯುಕ್ತರು. ಈ ಮುಖವನ್ನು ನೊಡಿದರೆ ಮೌಲ್ಯಗಳು ಸಂಪೂರ್ಣಕುಸಿದಿಲ್ಲ ಎಂದು ತೋರಿಸುತ್ತದೆ. ಯಾವುದೇ ಸನ್ನಿವೇಶವನ್ನು ಸಂಪೂರ್ಣ ವಾಗಿನೊಡಿದಾಗ ಒಂದು ಮುಖದಲ್ಲಿ ಮೌಲ್ಯ ಕುಸಿದಿರುವುದು ಕಂಡರೆ ಇನ್ನೊಂದು ಮುಖ ಮೌಲ್ಯಗಳು ಬದುಕಿರುವುದನ್ನು ತೋರಿಸುತ್ತದೆ. ಹೀಗೆ ಯಾವುದೇ ಸನ್ನಿವೇಶದ ಪೂರ್ಣಗೋಲವು ಈ ಎರಡು ಮುಖಗಳಿಂದ ಕೂಡಿದ್ದು , ಇವೆರೆಡನ್ನೂ ಒಟ್ಟಿಗೆ ನೋಡಿದಾಗ ಮಾತ್ರ ಅದು ಸಂಪೂರ್ಣವಾಗುವುದು ಬರೀ ಅರ್ಧ ಮುಖವನ್ನು ನೋಡಿದರೆ ದೊರೆಯುವುದು ಅರ್ಧ ಸತ್ಯ ಮಾತ್ರ.
ಮೌಲ್ಯ ಕುಸಿಯಿತು ಅಥವಾ ಕಾಲ ಕೆಟ್ಟುಹೋಯಿತು ಎನ್ನುವವರನ್ನು ಮನಶ್ಯಾಸ್ತ್ರದ ಪ್ರಕಾರ ಹೀಗೆ ವಿವರಿಸಬಹುದೇನೊ. ಕೆಲವು ವ್ಯಕ್ತಿಗಳಿಗೆ ತಮ್ಮ ಜೀವನದ ಒಂದು ಭಾಗ ಸುವರ್ಣಯುಗ ವೆಂದು ನಂಬಿಬಿಟ್ಟಿರುತ್ತಾರೆ. ಇಂತಹ ವ್ಯಕ್ತಿಗಳಿಗೆ ಇಂದಿನ ಕೆಲವು ಕೆಟ್ಟ ಸನ್ನಿವೇಶಗಳ ಕೆಟ್ಟ ಮುಖವನ್ನು ಕಂಡಾಗ, ತಮ್ಮ ಆಗಿ ಹೋದ ಸುವರ್ಣಯುಗದ ಮೌಲ್ಯಗಳೇ ಶ್ರೇಷ್ಟ ಎನಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಹಾಗೆಯೆ ನಾವು ಎನನ್ನು ನೊಡಲು ಬಯಸುತ್ತೇವೊ, ಅದೇ ನಮಗೆ ಎಲ್ಲಾ ಕಡೆ ತಾಂಡವವಾಡುತ್ತಿರುವಂತೆ ಗೋಚರಿಸುತ್ತದೆ. ನಾವು ಎಲ್ಲವನ್ನೂ ಸಕಾರತ್ಮಕವಾಗಿ ಕಾಣುವುದರಿಂದ ನಕಾರತ್ಮಕ ಭಾವನೆಗಳು ದೂರವಾಗುತ್ತವೆ. ಇಲ್ಲಿ ಕೆಟ್ಟವರನ್ನು ಖಂಡಿಸುವುದು ತಪ್ಪು ಎಂದು ಹೇಳುತ್ತಿಲ್ಲ, ಕೆಟ್ಟವರನ್ನು ಹಿಡಿಯುವುದು, ತಪ್ಪನ್ನು ಖಂಡಿಸುವುದು ಯಾವುದೇ ಆರೋಗ್ಯಕರವಾದ ಸಮಾಜದ ಒಂದು ಪ್ರಮುಖ ಗುಣವಾಗಿರಬೇಕು. ತಪ್ಪು ಮಾಡಿದವರನ್ನು ಖಂಡಿಸಿ ಯಾರೂ ಬೇಡಾ ಎನ್ನುವುದಿಲ್ಲ ಅದರೆ ಮೌಲ್ಯ ಮತ್ತು ಕಾಲದ ತಂಟೆಗೆ ಹೋಗದಿದ್ದರೆ ಸಾಕು.