’ಭಯ’ ನನ್ನು ಗೆದ್ದ ಹುಡುಗಿ ಮೇ 30, 2008
Posted by Bala in ಬದುಕು.Tags: ಭಯ
2 comments
ಒಮ್ಮೆ ಚಿಕ್ಕ ಹುಡುಗಿಯೊಬ್ಬಳು ಸೈನ್ಯದ ತರಬೇತಿ ಶಾಲೆಯನ್ನು ಸೇರಿದಳು. ಶಾಲೆಯ ಗುರು, ಅಕೆಯನ್ನು ಕರೆದು, “ನಾಳೆ ನೀನು ’ಭಯ’ನನ್ನು ಎದುರಿಸಬೇಕು ಸಿದ್ದವಾಗಿರು” ಎಂದರು. ಅದಕ್ಕೆ ಹುಡುಗಿ, “ಗುರುಗಳೇ ನಾನಿನ್ನೂ ಚಿಕ್ಕವಳು, ’ಭಯ’ ನನ್ನು ನೋಡಿದರೆ ಹೆದರಿಕೆ ಯಾಗುತ್ತದೆ, ಮುಂದೆ ಯಾವಾಗಲಾದರೂ ’ಭಯ’ ನನ್ನು ಎದುರಿಸುವೆ” ಎಂದಳು. ಗುರು ಹುಡುಗಿಯ ಮಾತಿಗೆ, “ಇಲ್ಲಿ ತರಬೇತಿಗೆ ಸೇರಿದವರೆಲ್ಲಾ ಮೊದಲು ’ಭಯ’ ನನ್ನು ಎದುರಿಸಲೇ ಬೇಕು, ನಾಳೆ ಸಿದ್ದವಾಗಿರು” ಎಂದರು.
ಬೆಳಗಾಯಿತು, ಹುಡುಗಿ ಭಯನನ್ನು ಎದುರಿಸಲು ಸಿದ್ದಳಾಗಿ, ತನ್ನ ಆಯುಧಗಳೊಂದಿಗೆ ಒಂದು ತುದಿಯಲ್ಲಿ ನಿಂತಳು, ಆಕೆಯ ಎದುರಿಗೆ ಭಯ ನಿಂತಿದ್ದ. ಹುಡುಗಿಗೆ ಭಯನ ಭಯಂಕರಾಕೃತಿಯ ಮುಂದೆ ತಾನು ಅತಿ ಕುಬ್ಜಳಂತೆನಿಸಿ ಹೆದರಿಕೆಯಾಯಿತು. ಯುದ್ದ ಆರಂಭವಾದಾಗ, ಹುಡುಗಿ ತನ್ನಲ್ಲಿದ್ದ ಎಲ್ಲಾ ಚೈತನ್ಯವನ್ನು ಒಗ್ಗೂಡಿಸಿ, ಮುಂದುವರೆದು ಭಯನ ಮುಂದೆ ನಿಂತು ಮೂರುಬಾರಿ ನಮಸ್ಕರಿಸಿ, ಭಯನನ್ನು ಕುರಿತು “ನಿನ್ನೊಂದಿಗೆ ಯುದ್ಧವನ್ನು ಮಾಡಲು ಅನುಮತಿ ನೀಡು” ಎಂದು ಕೇಳಿದಳು.
ಆಗ ಭಯ ಹೇಳಿದ, “ನನ್ನೊಡನೆ ಯುದ್ದಮಾಡಲು ಅನುಮತಿಯನ್ನು ಕೇಳಿ ನನ್ನನ್ನು ಗೌರವಿಸಿದ್ದಕ್ಕೆ ನಿನಗೆ ಧನ್ಯವಾದಗಳು”.
ಹುಡುಗಿ ಇನ್ನು ಸ್ವಲ್ಪ ಧೈರ್ಯದಿಂದ, ಭಯನನ್ನು ಕೇಳಿದಳು, “ಅಯ್ಯ, ನಿನ್ನನ್ನು ಸೋಲಿಸುವ ವಿಧಾನವನ್ನು ನನಗೆ ಹೇಳುವೆಯಾ”
ಅದಕ್ಕೆ ಭಯ ಹೀಗೆ ಉತ್ತರಿಸಿತು, “ನನ್ನ ಆಯುಧಗಳೆಂದರೆ, ನಾನು ಬಲು ವೇಗವಾಗಿ ಮಾತಾಡುತ್ತೇನೆ, ನಿನ್ನ ಮುಖದ ಸಮೀಪ ಬರುತ್ತೇನೆ, ಆಗ ನೀನು ಭಯಭೀತಳಾಗಿ, ನಾನು ಹೇಳಿದ್ದನ್ನು ಮಾಡುತ್ತೀಯ. ನಾನು ಹೇಳಿದ್ದನ್ನು ನೀನು ಮಾಡದಿದ್ದರೆ, ಆಗ ನನ್ನ ಶಕ್ತಿಯೆಲ್ಲಾ ವ್ಯರ್ಥವಾಗಿ ನಾನು ಸೋತು ಹೋಗುತ್ತೇನೆ. ನಾನು ಹೇಳುವುದನ್ನೆಲ್ಲಾ ನೀನು ಕೇಳಬಹುದು, ನನ್ನ ಬಗ್ಗೆ ಗೌರವ ಕೂಡ ಇಟ್ಟುಕೊಳ್ಳಬಹುದು, ನಾನು ಹೇಳಿದ್ದೆಲ್ಲಾ ನಿನಗೆ ಸರಿ ಎಂದು ಕೂಡಾ ಅನಿಸಬಹುದು, ಆದರೆ ನಾನು ಹೇಳಿದ್ದನ್ನು ನೀನು ಮಾಡದೇ ಹೋದರೆ, ನೀನು ಗೆದ್ದಂತೆ”
ಹುಡುಗಿ ಅದಮ್ಯ ಚೈತನ್ಯದಿಂದ, ‘ಭಯ’ ನನ್ನು ಎದುರಿಸಿ ಜಯವನ್ನು ಪಡೆದಳು.
ಈ ಕತೆ ನಮ್ಮ ನಚಿಕೇತ ಯಮನನ್ನು ಎದುರಿಸಿದ ಕತೆಯನ್ನು ನೆನಪಿಗೆ ತರಿಸುತ್ತದೆ.
ಈ ಕತೆಯನ್ನ್ನು ನಾನು ಓದಿದ್ದು, Pema Chodron ರವರ “When things fall apart” ಎಂಬ ಪುಸ್ತಕದಲ್ಲಿ.