jump to navigation

ಸತ್ಯದ ನಿಜವಾದ ಧ್ವನಿ ಜುಲೈ 16, 2008

Posted by Bala in ಬದುಕು.
Tags:
6 comments

ಸದಾನಂದ ಗುರುಕುಲದಲ್ಲಿದ್ದ ಶಿಷ್ಯರಲ್ಲೆಲ್ಲಾ ಅತಿ ಬುದ್ದಿವಂತ. ಈತ ಒಂದು ಮುಖ್ಯವಾದ ಮಂತ್ರವೊಂದನ್ನು ಕುರಿತು ಬಹಳ ಆಳವಾಗಿ ಅಭ್ಯಾಸ ಮಾಡಿದ್ದ. ವಿಧ್ಯಾಬ್ಯಾಸವಾದ ಮೇಲೆ, ಗುರುಕುಲದವರು ಅವನನ್ನು ಗುರುವಾಗಿ ನೇಮಿಸಿದರು. ಎರಡು ವರ್ಷಗಳಕಾಲ ಗುರುಕುಲದಲ್ಲಿ ಪಾಠ ಹೇಳಿದ ಸದಾನಂದ, ತನಗೀಗಾಗಲೇ ಎಲ್ಲಾ ತಿಳಿದಿದೆ, ತಾನಿನ್ನೇನನ್ನೂ ಕಲಿಯುವಂತಿಲ್ಲಾ ಎಂಬ ಧೊರಣೆ ತಳೆದಿದ್ದ. ಆಷ್ಟಾದರೂ, ಒಮ್ಮೆ ಹತ್ತಿರದ ದ್ವೀಪದಲ್ಲೊಬ್ಬ  ಮಹಾತ್ಮನಿರುವುದು ಇವನ ಗಮನಕ್ಕೆ ಬಂತು, ಮಹಾತ್ಮನ ಮಹಿಮೆಯನ್ನು ಕೇಳಿ, ತಾನು ಈ ಮಹಾತ್ಮನಲ್ಲಿ ಹೋಗಿ ಹೆಚ್ಚಿನದನ್ನು ಕಲಿಯಬೇಕೆಂದು ನಿರ್ಧರಿಸಿದ. ಅಂಬಿಗನೊಬ್ಬನ ಸಹಾಯದಿಂದ ದೋಣಿಯೇರಿ ಕೆರೆಯ ಮಧ್ಯದಲ್ಲಿದ್ದ , ಮಹಾತ್ಮನ ಸ್ಥಳಕ್ಕೆ ಸದಾನಂದ ಬಂದ. ಮಹಾತ್ಮ ಸದಾನಂದನನ್ನು ಆದರದಿಂದ ಬರಮಾಡಿಕೊಂಡು, ಸದಾನಂದನಿಗೆ ಗಿಡಿಮೂಲಿಕೆ ಚಹಾ ಮಾಡಿಕೊಟ್ಟ. ಇಬ್ಬರೂ ಚಹಾಕುಡಿಯುತ್ತಾ ಮಾತನಾಡಲಾರಂಭಿಸಿದರು.

ಸದಾನಂದ ಮಹಾತ್ಮನನ್ನು ಕೇಳಿದ, “ನಿಮ್ಮ ಅಧ್ಯಾತ್ಮದ ಸಾದನೆ ಹೇಗಿದೆ”. ಅದಕ್ಕೆ ಮಹಾತ್ಮ, “ನನ್ನ ಅಧ್ಯಾತ್ಮ ಸಾಧನೆಯಲ್ಲಿ ಹೇಳಿಕೊಳ್ಳುವಂತಾದ್ದೇನೂ ಇಲ್ಲ, ನಾನು ಯಾವಾಗಲು ಮಂತ್ರವೊಂದನ್ನು ಜಪಿಸುತ್ತಿರುತ್ತೇನೆ, ಅದಕ್ಕಿಂತ ಹೆಚ್ಚೇನೂ ಮಾಡುವುದಿಲ್ಲ”, ಎಂದುತ್ತರಿಸಿದ.

ಮಹಾತ್ಮ ಉಪಯೋಗಿಸುತ್ತಿದ್ದ ಮಂತ್ರ ತಾನು ಆಳವಾಗಿ ಅಭ್ಯಸಿಸಿದ್ದ ಮಂತ್ರ ಎಂದು ತಿಳಿದಾಗ ಸದಾನಂದ ಅತ್ಯಾನಂದದಿಂದ, ಮಹಾತ್ಮನನ್ನು ಆ ಮಂತ್ರವನ್ನು ಒಮ್ಮೆ ನಿಮ್ಮ ಬಾಯಿಂದ ಕೇಳುವಾಸೆ ಎಂದು ಕೇಳಿಕೊಂಡ.

ಮಹಾತ್ಮ ಗಟ್ಟಿಯಾಗಿ ಮಂತ್ರವನ್ನು ಉಚ್ಚರಿಸಿದಾಗ ಸದಾನಂದ ಬೆಚ್ಚಿಬಿದ್ದ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಮಹಾತ್ಮ, “ನನ್ನಿಂದೇನಾದರೂ ತಪ್ಪಾಯಿತೇ”, ಎಂದು ಸದಾನಂದನನ್ನು ಕೇಳಿದ.

ಅದಕ್ಕೆ ಸದಾನಂದ, “ಮಹಾತ್ಮ ತಮಗೆ ಹೇಗೆ ಹೇಳುವುದೋ ತಿಳಿಯುತಿಲ್ಲಾ, ನೀವು ನಿಮ್ಮ ಇಡೀ ಜೀವನವನ್ನ ನಿರರ್ಥಕವಾಗಿ ಕಳೆದಿದ್ದೀರ, ನೀವು ಹೇಳಿದ ಮಂತ್ರದ ಉಚ್ಚಾರಣೆ ಸರಿಯಾಗಿಲ್ಲ” ಎಂದ

“ಓ ದೇವರೇ, ಎಂಥಾ ಅನರ್ಥವಾಗಿಬಿಟ್ಟಿದೆ, ಸರಿ, ಈ ಮಂತ್ರದ ಸರಿಯಾದ ಉಚ್ಚಾರವನ್ನು ತಿಳಿಸುವೆಯಾ”, ಎಂದು ಮಹಾತ್ಮ ಸದಾನಂದನನ್ನು ಕೇಳಿಕೊಳ್ಳುತ್ತಾನೆ.

ಸದಾನಂದ ಮಹಾತ್ಮನಿಗೆ ಮಂತ್ರದ ಸರಿಯಾದ ಉಚ್ಚಾರವನ್ನು ಹೇಳಿಕೊಡುತ್ತಾನೆ. ಮಹಾತ್ಮ ಅತ್ಯಾನಂದದಿಂದ ಸದಾನಂದನಿಗೆ ಧನ್ಯವಾದಗಳನ್ನು ತಿಳಿಸಿ, “ನಾನು ಈ ಹೊಸಾ ಉಚ್ಚಾರಣೆಯನ್ನು ಕಲಿಯಲು ಸ್ವಲ್ಪ ಸಮಯಬೇಕು”, ಎಂದು ಹೇಳಿ  ಹೊರಟುಹೋಗುತ್ತಾನೆ.

ಕೆರೆಯ ದಡಕ್ಕೆ ನಡೆದು ಬರುವಾಗ ಸದಾನಂದನಿಗೆ, ನಾನೇನು ಹೊಸದಾಗಿ ಕಲಿಯಬೇಕಾಗಿಲ್ಲಾ, ನನಗೆಲ್ಲಾ ಆಗಲೇ ತಿಳಿದಿದೆ ಎಂಬುದು ಮನದಟ್ಟಾಗಿ, ಆ ಮಹಾತ್ಮನ ದುರಾದೃಷ್ಟಕ್ಕೆ ಮರುಗಿದ. ನಾನೇನಾದರೂ ಇಲ್ಲಿಗೆ ಬರದೇ ಹೋಗಿದ್ದರೆ, ಈ ಮಹಾತ್ಮನ ಗತಿ ಏನಾಗುತಿತ್ತು? ನಾನು ಬಂದದ್ದರಿಂದ ಈ ಮಹಾತ್ಮ ತನಗುಳಿದಿರುವ ಅಲ್ಪ ಆಯುಷ್ಯದಲ್ಲಿ ಮಂತ್ರವನ್ನು ಸರಿಯಾಗಿ ಉಚ್ಚರಿಸಲು ಕಲಿಯಬಹುದು, ಎಂದುಕೊಂಡು ತನ್ನನ್ನು ಕರೆತಂದ ಅಂಬಿಗನನ್ನು ಹುಡುಕುತ್ತಾ ಹೊರಟ.

ದೋಣಿ ಕೆರೆಯ ಮಧ್ಯಭಾಗದಲ್ಲಿದ್ದಾಗ, ಅಂಬಿಗ ಇದ್ದಕ್ಕಿದ್ದಂತೆ ತನ್ನ ಹುಟ್ಟುಗೋಲನ್ನ ಕೈಬಿಟ್ಟು, ಬಾಯಿ ತೆರೆದು ದಂಗಾಗಿದ್ದನ್ನು ನೋಡಿದ ಸದಾನಂದ, ಹಿಂದಿರುಗಿ ನೋಡುತ್ತಾನೆ, ಆ ಮಹಾತ್ಮ ಅತಿ ದೈನ್ಯತೆಯಿಂದ ದೋಣಿಯ ಪಕ್ಕದಲ್ಲಿ, ನೀರಿನ ಮೇಲೆ ನಿಂತಿದ್ದ.

“ದಯವಿಟ್ಟು ಕ್ಷಮಿಸಿ, ನಿಮಗೆ ಮತ್ತೆ ತೊಂದರೆ ಕೊಡಲು ಬಂದಿದ್ದೇನೆ, ನೀವು ಹೇಳಿಕೊಟ್ಟ ಮಂತ್ರದ ಉಚ್ಚಾರಣೆ ಮರೆತುಹೋಯಿತು, ದಯವಿಟ್ಟು ಮತ್ತೊಮ್ಮೆ ಹೇಳಿಕೊಡುವಿರಾ” ಎಂದು ಮಹಾತ್ಮ ಸದಾನಂದನನ್ನು ಕೇಳಿಕೊಂಡಾಗ.

ನಾಚಿ ನೀರಾದ ಸದಾನಂದ ತಲೆತಗ್ಗಿಸಿ ಹೇಳಿದ, “ಮಹಾತ್ಮ ನಿಮಗೆ ಅದರ ಅವಶ್ಯಕತೆ ಯಿಲ್ಲ”.

ಆದರೆ ಮಹಾತ್ಮ ಹಲವಾರು ಬಾರಿ ಪ್ರೀತಿಯಿಂದ ಒತ್ತಾಯಿಸಿದಾಗ, ಕೊನೆಗೆ ಸದಾನಂದ ಮತ್ತೊಮ್ಮೆ ಮಂತ್ರದ ಸರಿಯಾದ ಉಚ್ಚಾರಣೆಯನ್ನು ಮಹಾತ್ಮನಿಗೆ ಹೇಳಿಕೊಟ್ಟ.

ಈ ಬಾರಿ ಮಹಾತ್ಮ ತನ್ಮಯತೆಯಿಂದ ಸರಿಯಾದ ಮಂತ್ರವನ್ನು ಉಚ್ಚರಿಸುತ್ತಾ, ನಿಧಾನವಾಗಿ ನೀರಿನಮೇಲೆ ಹೆಚ್ಚೆಯಿಡುತ್ತಾ ತನ್ನ ದ್ವೀಪದತ್ತ ಸಾಗಿದ.

ಇದೊಂದು ಟಿಬೇಟ್ ಬೌದ್ದರಲ್ಲಿ ಪ್ರಚಲಿತವಾದ ಕತೆ.