jump to navigation

ಕೇಳಿಸಿಕೊಳ್ಳುವಿಕೆ ಜುಲೈ 7, 2008

Posted by Bala in ಬದುಕು.
Tags:
2 comments

So when you are listening to somebody, completely, attentively, then you are listening not only to the words, but also to the feeling of what is being conveyed, to the whole of it, not part of it. – Jiddu Krishnamurti

ಜಿದ್ದೂ ಕೃಷ್ಣಮೂರ್ತಿಯವರ ಮೇಲಿನ ಹೇಳಿಕೆ, ಮನುಷ್ಯನ ಜೀವನದಲ್ಲಿ ಕೇಳಿಸಿಕೊಳ್ಳುವಿಕೆಯ (Listening) ಬಗೆ ಹಾಗೂ ಪ್ರಾಮುಖ್ಯತೆಯನ್ನು ತಿಳಿಸುತ್ತದೆ . ತೆರೆದ ಮನಸ್ಸಿನಿಂದ, ಪೂರ್ವಾಗ್ರಹ ಪೀಡಿತರಾಗಿರದೆ, ತದೇಕ ಚಿತ್ತದಿಂದ ಇನ್ನೊಬ್ಬರ ಮಾತನ್ನು ಅವರ ಭಾವನೆಗಳೊಂದಿಗೆ ಸಂಪೂರ್ಣವಾಗಿ ಕೇಳಿಸಿಕೊಳ್ಳುವುದು ನಮ್ಮ ಜೀವನದಲ್ಲಿ ಬಹಳ ಮುಖ್ಯ. ಈ ಬಗೆಯ ಕೇಳಿಸಿಕೊಳ್ಳುವಿಕೆ ಇಲ್ಲದಿದ್ದರೆ, ನಾವು ಇನ್ನೊಬ್ಬರ ಮಾತನ್ನು ತಪ್ಪಾಗಿ ಅರ್ಥೈಸಿ, ಕೋಪ, ಸಿಟ್ಟು, ಅಸೂಯೆ ಮುಂತಾದ ಭಾವನೆಗಳಿಗೆ ಒಳಗಾಗಿ, ಅದರಿಂದಾಗಿ ಕಷ್ಟ,, ದುಃಖ ವನ್ನು ಪಡೆಯುವ ಸಾಧ್ಯತೆಯಿರುತ್ತದೆ. ಸರಿಯಾದ ಕೇಳಿಸಿಕೊಳ್ಳುವಿಕೆಯಿಂದ, ಹೇಳಿದವನ ಮಾತು ಮತ್ತು ಭಾವನೆಗಳು ಪೂರ್ಣವಾಗಿ ಅರ್ಥವಾಗಿ ಅದಕ್ಕೆ ತಕ್ಕಂತೆ ಕೋಪ ಸಿಟ್ಟಿಲ್ಲದೇ, ಶಾಂತವಾಗಿ ಉತ್ತರಿಸಬಹುದು.

ಎದುರಾಳಿ ಇನ್ನೂ ಆತನ ವಾಕ್ಯವನ್ನು ಸಂಪೂರ್ಣಮಾಡಿರುವುದೇ ಇಲ್ಲಾ, ಅಷ್ಟರಲ್ಲೇ, ಎಲ್ಲಾ ಅರ್ಥವಾದವರಂತೆ ನಮ್ಮ ವಾಗ್ಧಾಳಿಯನ್ನು ಆರಂಭಿಸಿಬಿಟ್ಟಿರುತ್ತೇವೆ, ಎಷ್ಟೋವೇಳೆ, ಎದುರಾಳಿ ತನ್ನ ವಾಕ್ಯವನ್ನು ಸಂಪೂರ್ಣಗೊಳಿಸಲು ಬಿಟ್ಟಿದ್ದರೆ, ಎಷ್ಟೊಂದು ಗೊಂದಲ ತಪ್ಪುತ್ತಿತ್ತು ಎಂಬುದು ನಮ್ಮ ಗ್ರಹಿಕೆಗೆ ಬಂದಿರುತ್ತದೆ. ನಾವು ಪೂರ್ವಾಗ್ರಹ ಪೀಡಿತರಾಗಿದ್ದರೆ, ಎದುರಾಳಿ ಹೇಳುವುದನ್ನ ಸರಿಯಾಗಿ ಕೇಳಿಸಿಕೊಳ್ಳುವುದೇ ಇಲ್ಲಾ. ಈ ನಿರ್ಲಕ್ಷ್ಯ ಕೂಡ ಗೊಂದಲ ತೊಂದರೆಗಳಿಗೆ ಎಡೆಮಾಡಿಕೊಡಬಹುದು. ಎದುರಾಳಿ ಮಾತಾಡುವಾಗ, ಆತನ ಮಾತುಗಳ ಬಗ್ಗೆ ಗಮನಕೊಡದೆ, ಆ ವಿಶಯದ ಪೂರ್ವಾಪರಗಳನ್ನು ಯೊಚಿಸಲು ಶುರುಮಾಡಿರುತ್ತೇವೆ, ಯಾಕೆಂದರೆ ಎದುರಾಳಿ ಮಾತು ನಿಲ್ಲಿಸಿದ ತಕ್ಷಣ ನಾವು ಅವನಿಗೆ ತಕ್ಕ ಉತ್ತರ ಕೊಡಬೇಕಲ್ಲವೇ? ನಮಗೆ ಎದುರಾಳಿಗಿಂತ ಹೆಚ್ಚಿನ ತಿಳುವಳಿಕೆ ಇದೇ ಎಂದು ತೊರಿಸಿಕೊಳ್ಳಬೇಕಲ್ಲವೇ? ಈ ಬಗೆಯ ಕೇಳಿಸಿಕೊಳ್ಳುವಿಕೆ ಕೂಡಾ ಗೊಂದಲ ತೊಂದರೆಗಳಿಗೆ ಎಡೆ ಮಾಡಿಕೊಡಬಹುದು.

ಸರಿಯಾದ ಕೇಳಿಸಿಕೊಳ್ಳುವಿಕೆ, ಮನುಷ್ಯನ ಜೀವನಕ್ಕೆ ಅತ್ಯವಶ್ಯಕ, ಹಾಗೆ ಎಲ್ಲರೂ ರೂಢಿಸಿಕೊಳ್ಳಬಹುದಾದ ಗುಣ. ಈ ಸರಿಯಾದ ಕೇಳಿಸಿಕೊಳ್ಳುವಿಕೆ, ನಾವು ಈ ಕ್ಷಣದಲ್ಲಿ ಬದುಕುವುದನ್ನು ಕಲಿಸುತ್ತದೆ ಹಾಗೆಯೆ ನಾವು ಘಾಢವಾಗಿ ಈ ಕ್ಷಣದಲ್ಲಿ ಬದುಕಿದರೆ ಕೇಳಿಸಿಕೊಳ್ಳುವಿಕೆ ತನಗೆ ತಾನೆ ಸರಿಯಾಗಿರುತ್ತದೆ.