jump to navigation

ಸಹಾಯ ಆಗಷ್ಟ್ 15, 2008

Posted by Bala in ಸಣ್ಣಕತೆ.
Tags:
2 comments

೧.

“ಆರಾದ್ಯ ಅವರಿಗೆ ಹುಶಾರಿಲ್ಲವಂತೆ ಸಾರ್”, ವರದಿಗಾರ ದಿವಾಕರನ ದನಿಗೆ ತಲೆಯೆತ್ತಿ ನೋಡಿದೆ, “ಪಂಡಿತ್ ಅರಾಧ್ಯ ರವರೇನ್ರಿ?” ಎಂದೆ

“ಹೌದು ಸಾರ್” ಎಂದ ದಿವಾಕರ.

“ಏನಾಗಿದೆಯಂತ್ರಿ” ಎಂದಿದ್ದಕ್ಕೆ, “ನನಗೆ ಡೀಟೈಲ್ಸ್ ಗೊತ್ತಿಲ್ಲಾಸಾರ್, ಬರೀ ವಿಶಯ ತಿಳಿತು” ಎಂದ ದಿವಾಕರ್.

ಇಡೀ ನಾಡಿನಲ್ಲೇ ಪಂಡಿತ ಅರಾದ್ಯರವರ ಸಂಗೀತ ಕೇಳದವರಿರಲಿಲ್ಲ, ಎಲ್ಲ ಪ್ರತಿಷ್ಟಿತ ಅವಾರ್ಡ್ ಗಳು ಅರಾದ್ಯ ಅವರನ್ನು ಅರಸಿಬಂದಿದ್ದವು. ಆರಾದ್ಯರವರು ನಮ್ಮ ನಾಡಿನ ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದರು. ನನ್ನ ಅಚ್ಚುಮೆಚ್ಚಿನ ಸಂಗೀತಗಾರನಿಗೆ ಹುಶಾರಿಲ್ಲ ವೆಂದು ತಿಳಿದ ಮೇಲೆ, ನಾನು ಮಾಡುತಿದ್ದ ಕೆಲಸವನ್ನು ಅಲ್ಲೇ ನಿಲ್ಲಿಸಿ, ಸಂಪಾದಕರಿಗೆ ಸುದ್ದಿ ತಿಳಿಸಿ, ಆರಾದ್ಯ ಅವರನ್ನೊಮ್ಮೆ ಮಾತಾಡಿಸಿ ಬರುತ್ತೇನೆ ಎಂದು ಹೇಳಿ, ಬ್ಯಾಗ್ ಹೆಗಲಿಗೇರಿಸಿ, ನನ್ನ ಸ್ಕೂಟರ್ ಹತ್ತಿದೆ. ಆರಾದ್ಯ ಅವರನ್ನು ಅನೇಕ ಬಾರಿ ಭೇಟಿಯಾಗಿದ್ದೆ, ಅವರಿಗೂ ನಾನು ತುಂಬಾ ಪರಿಚಿತನಾಗಿದ್ದೆ. ಸ್ಕೂಟರನ್ನು ನೇರವಾಗಿ ಆರಾಧ್ಯ ಅವರ ಮನೆ ಕಡೆ ತಿರುಗಿಸಿದೆ. ಆವರ ಮನೆ ನಗರದ ಹೊರವಲಯದಲ್ಲಿದ್ದು, ಸೈಟು ದೊಡ್ಡದಾಗಿದ್ದರೂ, ಚಿಕ್ಕದಾಗಿ ಮನೆ ಕಟ್ಟಿಸಿಕೊಂಡಿದ್ದರು.

ಮನೆಯ ಬಾಗಿಲನ್ನು ಮೆಲ್ಲಗೆ ತಟ್ಟಿದೆ, ಸ್ವಲ್ಪ ಸಮಯದ ನಂತರ ಆರಾಧ್ಯ ಅವರ ಹೆಂಡತಿ ವಿಶಾಲಾಕ್ಷಮ್ಮನವರು ಬಾಗಿಲು ತೆರೆದರು, ಮುಖದಲ್ಲಿ ಎಂದಿನಂತಿನ ನಗುವಿರಲಿಲ್ಲ, ಕಣ್ಣನ್ನು ಸಣ್ಣದಾಗಿಸಿ ನೋಡಿ “ನೀವು ಚಿದಾನಂದ ಅಲ್ಲವೇ” ಎಂದರು, “ಹೌದು, ಆರಾದ್ಯ ಅವರಿಗೆ ಹುಶಾರಿಲ್ಲ ವೆಂದು ತಿಳಿದು ನೋಡಲು ಬಂದೆ” ಎಂದೆ, ಬನ್ನಿ ಒಳಗೆ ಎಂದು ಕರೆದರು, ನಾನು ಒಳಗೆ ಹೋಗಿ, ಚಪ್ಪಲಿಯನ್ನು ಬಿಚ್ಚಿ, ನಿಂತೆ, ಬಾಗಿಲು ಮುಚ್ಚಿದ ವಿಶಾಲಕ್ಷಮ್ಮನವರು, ಅವರು ಹಾಸಿಗೆ ಹಿಡಿದು ಹದಿನೈದು ದಿನವಾಯಿತು, ಆಸ್ಪತ್ರೆಗೆ ಸೇರಿಸಬೇಕು, ಮಂತ್ರಿಗಳಿಗೆ ವಿಶಯ ತಿಳಿಸಿದ್ದರೂ ಯಾರು ಈ ಕಡೆ ತಿರುಗಿ ನೋಡಿಲ್ಲಾ. ಹೀಗೆ ಬನ್ನಿ ಎಂದು ನನ್ನನ್ನು ಆರಾದ್ಯರವರಿದ್ದ ಕೋಣೆಗೆ ಕರೆದೊಯ್ದರು.

ನನ್ನನ್ನು ನೋಡಿ ಕೈಮುಗಿದ ಆರಾದ್ಯರವರು ಮೇಲೆ ಏಳಲು ಪ್ರಯತ್ನಿಸಿದರು, ಏಳಲಾಗಲಿಲ್ಲ, ನಾನೆ ಮುಂದೆ ಹೋಗಿ ಅವರನ್ನು ತಡೆದು, ನೀವು ಮಲಗಿರಿ, ಎಂದು ಅವರ ಹಾಸಿಗೆಯಪಕ್ಕದಲ್ಲಿದ್ದ ಸ್ಟೂಲಿನ ಮೇಲೆ ಕುಳಿತೆ.

ಬಾಡಿದ ದನಿಯಲ್ಲಿ ಆರಾದ್ಯರವರು ಮಾತಾಡಲಾರಂಭಿಸಿದರು, “ನಾಡಿಗಾಗಿ, ಸಂಸ್ಕೃತಿಗಾಗಿ, ನನ್ನ ಜೀವವನ್ನೇ ಸವೆದೆ, ನನಗೆ ಆರೋಗ್ಯವಿಲ್ಲದ ಸಮಯದಲ್ಲಿ ನನ್ನನ್ನು ನೋಡುವವರಾರು ಇಲ್ಲವಾಯಿತು, ಚಿದಾನಂದ ನಿಮ್ಮಿಂದ ಒಂದು ಸಹಾಯವಾಗಬೇಕು, ದಯವಿಟ್ಟು ಸುದ್ದಿ ಸರ್ಕಾರಕ್ಕೆ ತಿಳಿಯುವಂತೆ ಮಾಡಿ, ಸರ್ಕಾರ ನನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಮಾಡುವಿರಾ” ಎಂದು ಕೇಳಿಕೊಂಡರು. ನೀವೇನೂ ಯೋಚನೇ ಮಾಡ್ಬೇಡಿ ಸಾರ್, ನಾನದಕ್ಕೆ ವ್ಯವಸ್ಥೆ ಮಾಡ್ತೀನಿ ಎಂದು ಭರವಸೆಯಿತ್ತು. ಅವರಿಂದ ಬೀಳ್ಕೊಟ್ಟು ನೇರ ಆಫೀಸಿಗೆ ಬಂದೆ. ಆರಾಧ್ಯ ಅವರ ಅನಾರೊಗ್ಯದ ಬಗ್ಗೆ ಒಂದು ಲೇಖನ ತಯಾರಿಸಿ ಸಂಪಾದಕರಿಗೆ ತೋರಿಸಿ ಅಚ್ಚಿನಮನೆಗೆ ಕಳುಹಿಸಿದೆ. ಬೆಳಿಗ್ಗೆ ದಿನವಾಣಿಯಲ್ಲಿ ದೊಡ್ಡ ಹೆಡ್ಡಿಂಗ್‍ನಲ್ಲಿ, “ಆರಾದ್ಯರಿಗೆ ಅನಾರೊಗ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ” ಪ್ರಕಟವಾಯಿತು.

೨.

ಸುದ್ದಿ ಓದಿದ ಮುಖ್ಯಮಂತ್ರಿ ರಾಮರಾಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಸಿದ್ದಪ್ಪನವರನ್ನು ಕರೆಸಿದರು. “ಅಲ್ಲಾರೀ, ಆರಾದ್ಯ ಅವರಿಗೆ ಅನಾರೊಗ್ಯ ಅಂತ ನಾವು ಪೇಪರ್ ಓದಿ ತಿಳ್ಕೋ ಬೇಕೇನ್ರಿ, ನಿಮ್ಮ ಇಲಾಖೆ ಏನ್ಮಾಡ್ತಾಇತ್ರಿ”,

“ಸಾರಿ ಸಾರ್, ನಾನು ಕಳೆದವಾರ ಪ್ರವಾಸಕ್ಕೆ ಹೋಗಿದ್ದರಿಂದ, ಈ ವಿಶಯ ನನ್ನ ಗಮನಕ್ಕೆ ಬಂದಿರಲಿಲ್ಲ ಸಾರ್”.

“ಸರಿ ನಡೀರಿ ಆರಾದ್ಯ ಅವರ ಮನೆಗೆ ಹೋಗೋಣಾ, ಹಾಗೆ, ಪ್ರೆಸ್ ನವರಿಗೂ ಬರೋಕೆ ಹೇಳ್ರಿ” ಎಂದರು ರಾಮರಾಯರು.

ಆರಾಧ್ಯ ಅವರ ಮನೆ ಮುಂದೆ ಮುಖ್ಯಮಂತ್ರಿ ರಾಮರಾಯರು, “ಆರಾದ್ಯ ಅವರ ಅರೋಗ್ಯದ ಹೊಣೆ ನಮ್ಮ ಸರ್ಕಾರದ್ದು, ಅವರ ಆಸ್ಪತ್ರೆಯ ಸಂಪೂರ್ಣ ಖರ್ಚನ್ನು  ಸರ್ಕಾರ ಭರಿಸುತ್ತದೆ” ಎಂದು ಹೇಳಿಕೆ ಕೊಟ್ಟರು. ರಾಮರಾಯರೇ ಖುದ್ದು ನಿಂತು, ಆರಾಧ್ಯರನ್ನು ತಕ್ಷಣಾ ಅಸ್ಪತ್ರೆಗೆ ಸೇರಿಸಲು ಏರ್ಪಾಟು ಮಾಡಿದರು.

೩.

ಆಸ್ಪತ್ರೆಯಲ್ಲಿ, ವಿಶಾಲಾಕ್ಷಮ್ಮ ಪತಿಯ ಬಳಿ ಮೂಸಂಬಿಯ ರಸ ಹಿಂಡುತ್ತಾ, ನಾನು ಏಷ್ಟು ಹೇಳಿದರೂ ಇವರು ಕೇಳಲಿಲ್ಲ, ಮನೆ ಮಾರಿಯದರೂ ಸರಿ, ನಿಮ್ಮ ಆರೊಗ್ಯವನ್ನು ಸರಿಪಡಿಸಿಕೊಳ್ಳೊಣ ಎಂದರೆ, ನನಗೇನಾಗಿದೆಯೆ, ಎಲ್ಲಾ ಸರಿಹೋಗುತ್ತೆ ಬಿಡು, ಮನೆ ಮಾರಿದರೆ ಮುಂದೆ ಎಲ್ಲೇ ಬದುಕೋದು, ಅದೂ ಅಲ್ಲದೇ, ನನ್ನಂತಾ ವಿದ್ವಾಂಸರ ಆರೋಗ್ಯದ ಹೊಣೆ ಸರ್ಕಾರದ್ದು, ನೀನೇನು ಯೊಚನೇ ಮಾಡ್ಬೇಡಾ, ಮಂತ್ರಿಗಳ ಸಹಾಯಕನಿಗೆ ವಿಶಯ ತಿಳಿಸಿದ್ದೀನಿ, ಎಂದು ನನ್ನ ಬಾಯಿ ಮುಚ್ಚಿಸಿದರು. ವಾರವಾದರೂ ಯಾರೂ ಈ ಕಡೇ ತಿರುಗಿನೋಡಲೇ ಇಲ್ಲಾ. ಇವರ ಅರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತಾ ಹೋಯಿತು, ಚಿದಾನಂದನಿಂದ ಸಹಾಯದೊರಕದಿದ್ದರೆ ಏನಾಗುತಿತ್ತೋ, ಯಾರೊ ರೂಮಿನೊಳಗೆ ಬಂದಂತಾಗಿ ವಿಶಾಲಾಕ್ಷಮ್ಮನವರ  ಯೊಚನೇ ಅಲ್ಲಿಗೇ ನಿಂತಿತು.

ಡಾಕ್ಟರ್ ಮೂರನೇಬಾರಿ, ಆರಾಧ್ಯ ಅವರನ್ನು ಚೆಕ್ ಮಾಡಲು ರೂಮಿನೊಳಗೆ ಬಂದರು, ಆರಾದ್ಯ ಅವರು ಮಲಗಿದ್ದ ರೀತಿ ನೋಡಿ ಗಾಬರಿಯಿಂದ ಅವರನ್ನು ಪರೀಕ್ಷಿಸಿದರು, ಆಷ್ಟರಲ್ಲಾಗಲೇ ಆರಾದ್ಯರವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ವಿರೋಧ ಪಕ್ಷದ ನಾಯಕ ತಮ್ಮಣ್ಣ ನವರು, ಪ್ರೆಸ್ ಕಾನ್ಫರೆನ್ಸ್ ಕರೆದು, “ಸರ್ಕಾರ ತನ್ನ ಕಾರ್ಯವನ್ನು ನಿರ್ವಹಿಸುವುದರಲ್ಲಿ ಸೋತಿದೆ, ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಇವತ್ತು ನಾವು ಆರಾದ್ಯರಂತ ಹೆಸರಾಂತ ಸಂಗೀತಗಾರರನ್ನು ಕಳೆದುಕೊಳ್ಳುವಂತಾಗಿದೆ. ಆರಾಧ್ಯರ ಆತ್ಮಕ್ಕೆ ಶಾಂತಿಕೋರುತ್ತಾ, ನಾನು ಇವತ್ತು ಸರ್ಕಾರದ ಕಾರ್ಯವನ್ನು ವಿರೋಧಿಸುತ್ತಾ, ಒಂದು ದಿನದ ಉಪವಾಸವನ್ನು ಕೈಗೊಂಡಿದ್ದೇನೆ”, ಎಂದು ಹೇಳಿಕೆಯಿತ್ತರು.

ಎಲ್ಲಿ ಜಾರಿತೋ ನನ್ನ ಗುಂಡಿ!! ಜುಲೈ 24, 2008

Posted by Bala in ಸಣ್ಣಕತೆ.
Tags:
7 comments

ಬೆಳಿಗ್ಗೆ ನನಗೆ ತುಂಬಾ ಇಷ್ಟವಾದ ಶರಟನ್ನು ಇಸ್ತ್ರೀ ಮಾಡುತ್ತಿರುವಾಗ, ಶರಟಿನ ಮಧ್ಯದ ಒಂದು ಗುಂಡಿ ಸಡಿಲವಾಗಿದ್ದು ಕಾಣಿಸಿತು, ಗುಂಡಿಯನ್ನು ಸ್ವಲ್ಪ ಎಳೆದು ನೋಡಿದೆ, ನಾಲ್ಕೋ ಐದೊ ದಾರಗಳಿದ್ದು ಸ್ವಲ್ಪ ಲೂಸಾಗಿದ್ದುದು ಕಂಡುಬಂತು. ಈ ಗುಂಡಿ ಇವತ್ತು ಕಿತ್ತು ಹೋಗುತ್ತೆ ಅನ್ನಿಸಿತು. ಆದರೆ, ಆಫೀಸಿಗೆ ಹೊರಡುವ ಸಮಯವಾಗಿದ್ದು, ಮತ್ತೊಂದು ಶರಟನ್ನು ಇಸ್ತ್ರೀಮಾಡುವಷ್ಟು ಸಮಯವಿರಲಿಲ್ಲ, ಇಷ್ಟು ದಿನ ಬದುಕಿದ ಗುಂಡಿ, ಇವತ್ತೊಂದು ದಿನ ಬದುಕತ್ತೆ, ಅಲ್ಲದೇ ಇದು ಮಧ್ಯದ ಗುಂಡಿಯಾದ್ದರಿಂದ ಇದು ಇವತ್ತು ಬಧುಕುವ ಸಾಧ್ಯತೆ ಇದೇ ಎಂದುಕೊಂಡು ಶರಟನ್ನ ಮೈಯಿಗೇರಿಸಿದೆ.

ಮೆಟ್ರೋ ರೈಲಿನಲ್ಲಿ ಕೂತು, ಪುಸ್ತಕ ಓದುತಿದ್ದ ನಾನು, ಓದಿದ ಒಂದು ವಾಕ್ಯವನ್ನು ಆನಂದಿಸುತ್ತಾ ಪುಸ್ತಕದಿಂದ ತಲೆಯೆತ್ತಿದೆ, ಎದುರಿಗೆ ಒಂದು ಹುಡುಗಿ, ಆಕೆಯ ಮುಖದ ಒಂದು ಬಾಗದಲ್ಲಿದ್ದ ದಟ್ಟವಾದ ಕೂದಲನ್ನು ಎರಡೂಕೈಯಿಂದ ಹಿಡಿದು ಏನೋ ಯೋಚನೆಯಲ್ಲಿ ಮುಳುಗಿದ್ದು ಕಣ್ಣಿಗೆ ಬಿತ್ತು, ಸರಿಯಾಗಿ ಅವಳ ಕೈಬೆರಳುಗಳನ್ನು ಗಮನಿಸಿದಾಗ, ಆಕೆ ತನ್ನ ಒಂದು ಕೂದಲನ್ನ ಸೀಳುತಿದ್ದಾಳೇನೋ ಎನಿಸಿತು, ಕೂದಲ ಸೀಳುವಿಕೆಯನ್ನು ನೆನೆಸಿಕೊಂಡ ನನಗೆ ನಗು ಬಂತು.

ಆಫೀಸಿನಲ್ಲಿ ತುಂಬಾ ಕೆಲಸವಿದ್ದುದರಿಂದ ಗುಂಡಿಯ ವಿಷಯ ಮರೆತೇ ಹೋಗಿತ್ತು, ಬೆಳಿಗ್ಗೆ ಮೀಟಿಂಗೊಂದನ್ನು ಮುಗಿಸಿ ಹೊರಬರುವಾಗ, ಆಕಸ್ಮಿಕವಾಗಿ ಕಣ್ಣು ಶರಟಿನ ಗುಂಡಿಯ ಮೇಲೆ ಹೋಯಿತು, ಗುಂಡಿಯನ್ನು ನೋಡಿ ಖುಶಿಯಾಯಿತು, ಭಲೇ ಇನ್ನೂ ಜೀವವಿದೇ ಈ ಗುಂಡಿಗೆ ಎಂದುಕೊಂಡು ಮತ್ತೆ ಕೆಲಸದಲ್ಲಿ ಮುಳುಗಿಹೋದೆ.

ಮಧ್ಯಾನ ಊಟಕ್ಕೆಂದು ಹೊರಗೆ ಹೋಗುತಿದ್ದಾಗ, ನನ್ನ ಮುಂದೆ ಒಬ್ಬ ತಂದೆ ತನ್ನ ಸುಮಾರು ಐದು ವರುಷದ ಮಗನನ್ನು ಹೆಗಲಮೇಲೆ ಕೂರಿಸಿಕೊಂಡು, ತನ್ನ ಮೂರು ವರುಷದ ಮಗಳನ್ನು ಕೈಹಿಡಿದು ನಡೆಸಿಕೊಂಡು ಹೋಗುತಿದ್ದರು, ನಾನು ಅವರನ್ನು ಇನ್ನೇನು ಹಿಂದೆ ಹಾಕಿ ಮುಂದೆ ಹೋಗಬೇಕೆನ್ನುವಾಗ, ತಂದೆ ನಿಂತು ಮಗನನ್ನು ಕೆಳಗೆ ಇಳಿಸಿ ಮಗಳನ್ನು ಹೆಗಲ ಮೇಲೆ ಕೂರಿಸಿಕೊಳ್ಳುತ್ತಿರುವುದು ಕಾಣಿಸಿತು. ನನಗಿರುವ ಒಬ್ಬಳೇ ಮಗಳು ನೆನಪಿಗೆ ಬಂದು ನಗು ಬಂತು.

ಮಧ್ಯಾನ ಊಟವಾದ ಮೇಲೆ, ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುತಿದ್ದಾಗ, ಶರಟಿನ ಮಧ್ಯದ ಭಾಗ ಮುಂದೆ ಬಂದು ಒಳಗಿನ ಬನಿಯನ್ ಕಾಣಿಸುತಿತ್ತು, ಗುಂಡಿ ಕಿತ್ತು ಹೋಗಿದೆ ಎಂಬ ಅರಿವು ಬಂದ ತಕ್ಷಣ, ನಾನು ಕುಳಿತಿದ್ದ ಕುರ್ಚಿಯ ಸುತ್ತಾಮುತ್ತಾ ನೋಡಿದೆ, ನನ್ನ ಟೇಬಲ್ ಕೆಳಗಡೆ ಬಗ್ಗಿ ನೋಡಿದೆ ಎಲ್ಲೂ ಗುಂಡಿ ಕಾಣಿಸಲಿಲ್ಲ, ನಾನು ಸಾಮಾನ್ಯ ನಡೆಯುವ ದಾರಿಗಳಲ್ಲೆಲ್ಲಾ ಹೋಗಿ ಬಂದೆ, ಎಲ್ಲೂ ಕಾಣಿಸಲಿಲ್ಲಾ. ಲಕ್ಷ್ಮೀ ನಾರಾಯಣ ಭಟ್ಟರ ಕವಿತೆ ನೆನಪಿಗೆ ಬಂತು, ಎಲ್ಲಿ ಜಾರಿತೋ ನನ್ನ ಗುಂಡಿ!! ಎಲ್ಲಿ ಅಲೆಯುತಿಹುದೋ ಎನೋ!! ಅಂತು ಬೆಳಿಗ್ಗೆ ಅನಿಸಿದಂತೆ ನನ್ನ ಪ್ರೀತಿಯ ಅಂಗಿಯ ಪ್ರೀತಿಯ ಗುಂಡಿ ಕಣ್ಮರೆಯಾಗಿತ್ತು,

ಬದುಕಿದ್ದಾಗಲೇ ಸತ್ತ ಗಿಳಿಯ ಕತೆ ಡಿಸೆಂಬರ್ 16, 2007

Posted by Bala in ಬದುಕು.
Tags:
2 comments

ಬಹಳ ಹಿಂದೆ, ಭಾರತದ ಒಬ್ಬ ವ್ಯಾಪಾರಿ ವ್ಯಾಪಾರದ ಸಲುವಾಗಿ ಆಫ್ರಿಕಾದೇಶಕ್ಕೆ ಹೊಗಿದ್ದ. ಆಲ್ಲಿದ್ದ ಕಾಡಿನಲ್ಲಿ ವಿಹರಿಸುವಾಗ, ಆತನಿಗೆ ಬಣ್ಣ ಬಣ್ಣಗಳಿಂದ ಅಲಂಕೃತವಾದ, ಸುಂದರವಾದ ಮಾತಾಡುವ ಗಿಳಿಗಳ ಗುಂಪೊಂದು ಕಾಣಿಸಿತು. ಇವುಗಳಲ್ಲಿ ಒಂದು ಗಿಳಿಯನ್ನು ಹಿಡಿದು ತನ್ನ ಮನೆಗೆ ಒಯ್ಯಲು ನಿರ್ದರಿಸಿದ ವ್ಯಾಪಾರಿ. ಮಾತಾಡುವ ಗಿಳಿಯೊಂದಿಗೆ ಮನೆಗೆ ಹಿಂದಿರುಗಿದ ವ್ಯಾಪಾರಿ, ಗಿಳಿಯನ್ನು ಒಂದು ಪಂಜರದಲ್ಲಿ ಇಟ್ಟು ತನ್ನ ಸಾಕು ಪ್ರಾಣಿಯಂತೆ ಸಾಕಲಾರಂಭಿಸಿದನು. ಅದಕ್ಕೆ ಒಳ್ಳೆ ಹಣ್ಣು, ಬೀಜಗಳ ಊಟ ಕೊಟ್ಟು, ದಿನವೂ ಸಂಗೀತವನ್ನು ಕೇಳಿಸುತಿದ್ದ, ಒಟ್ಟಾರೆ ಗಿಳಿಯನ್ನು ಚೆನ್ನಾಗಿ ನೊಡಿಕೊಳ್ಳುತಿದ್ದನು.

ಕೆಲವು ವರ್ಷಗಳ ನಂತರ ವ್ಯಾಪಾರರ್ಥವಾಗಿ ವ್ಯಾಪಾರಿ ಮತ್ತೆ ಆಫ್ರಿಕಾದೇಶಕ್ಕೆ ಹೊಗಬೇಕಾಗಿ ಬಂದಾಗ, ಆತ ಗಿಳಿಯ ಹತ್ತಿರ ಹೊಗಿ, “ನಾನು ಮತ್ತೆ ನಿನ್ನ ತವರಿಗೆ ಹೋಗುತಿದ್ದೇನೆ, ನಿನ್ನ ಬಂಧು ಬಳಗ ಮತ್ತು ನಿನ್ನ ಸ್ನೇಹಿತರಿಗೆ ಏನಾದರೂ ಹೇಳಬೇಕೆಂದಿದ್ದರೆ ತಿಳಿಸು, ನಾನು ನಿನ್ನವರಿಗೆ ವಿಷಯ ತಲುಪಿಸುತ್ತೇನೆ ಎಂದ. ಆದಕ್ಕೆ ಗಿಳಿ, “ನಾನು ಇಲ್ಲಿ ನನ್ನ ಪಂಜರದಲ್ಲಿ ಪ್ರತಿದಿನವನ್ನೂ ತುಂಬಾ ಸಂತೋಷದಿಂದ ಕಳೆಯುತಿದ್ದೆನೆ ಎಂದು ಮತ್ತು ನನ್ನ ಶುಭಕಾಮನೆಗಳನ್ನು ನನ್ನವರಿಗೆ ತಿಳಿಸು”, ಎಂದು ಹೇಳಿತು.

ವ್ಯಾಪಾರಿ ಆಫ್ರಿಕಾದೇಶಕ್ಕೆ ತೆರಳಿ, ಗಿಳಿಯಿರುತಿದ್ದ ಕಾಡಿಗೆ ಹೋಗಿ, ಗಿಳಿಯ ಸಂದೇಶವನ್ನು ಅದರ ಬಂಧುಬಾಂದವರೂ ಮತ್ತು ಸ್ನೇಹಿತರಿಗೆ ತಿಳಿಸಿದ. ವ್ಯಾಪಾರಿ ಸಂದೇಶವನ್ನು ಹೇಳಿ ಮುಗಿಸುತಿದ್ದಂತೆ, ಅಲ್ಲಿದ್ದ ಒಂದು ಗಿಳಿ ತನ್ನ ಕಣ್ಣಿನಲ್ಲಿ ನೀರು ತುಂಬಿಕೊಂಡು, ಮರದ ಮೇಲಿಂದ ಕೆಳಗೆ ಬಿದ್ದು ಸತ್ತು ಹೋಯಿತು. ಇದನ್ನು ನೋಡಿದ ವ್ಯಾಪಾರಿ ಆಶ್ಚರ್ಯಚಕಿತನಾದರೂ, ಸತ್ತ ಗಿಳಿ ನನ್ನ ಮನೆಯಲ್ಲಿರುವ ಗಿಳಿಯ ಪ್ರಾಣಸ್ನೇಹಿತನಿರಬಹುದು, ಅದಕ್ಕೆ ಸ್ನೇಹಿತನ ನೆನಪಿನಿಂದ ಪ್ರಾಣ ಬಿಟ್ಟಿರಬೇಕು ಎಂದು ಕೊಂಡು ತನ್ನ ಪ್ರಯಾಣ ಮುಂದುವರೆಸಿದ.

ಮನೆಗೆ ಬಂದ ವ್ಯಾಪಾರಿ, ತನ್ನ ಪಂಜರದಲ್ಲಿದ್ದ ಗಿಳಿಗೆ, ಆಫ್ರಿಕಾದ ಕಾಡಿನಲ್ಲಿ ನಡೆದ ಘಟನೆಯನ್ನು ತಿಳಿಸಿದ. ವ್ಯಾಪಾರಿ ಮಾತು ಮುಗಿಯುತಿದ್ದಂತೆ, ಪಂಚರದಲ್ಲಿದ್ದ ಗಿಳಿಯ ಕಣ್ಣಿನಲ್ಲಿ ನೀರು ತುಂಬಿಕೊಂಡು, ದೊಪ್ಪನೆ ಬಿದ್ದು ಸತ್ತು ಹೋಯಿತು. ಇದನ್ನು ನೋಡಿದ ವ್ಯಾಪಾರಿ ದಿಗ್ಬ್ರಾಂತನಾದರೂ, ತನ್ನ ಸಾಕು ಗಿಳಿ, ಅದರ ಪ್ರಾಣಸ್ನೇಹಿತ ಸತ್ತ ವಿಷಯ ಕೇಳಿ, ತೀವ್ರವಾದ ದುಃಖದಿಂದ ತನ್ನ ಪ್ರಾಣ ಬಿಟ್ಟಿರಬೇಕು ಎಂದು ಕೊಂಡ. ನಂತರ ವ್ಯಾಪಾರಿ, ಪಂಜರವನ್ನು ತೆರೆದು, ಸತ್ತ ಗಿಳಿಯ ಕಳೆಬರಹವನ್ನು ತನ್ನ ಕೈಯಲ್ಲಿ ಎತ್ತಿಕೊಂಡು ಹೊರಗಡೆ ಹೋಗುತಿದ್ದಂತೆ, ಗಿಳಿ ಪುರ್ ಎಂದು ಆತನ ಕೈಯಿಂದ ತಪಿಸಿಕೊಂಡು ಹಾರಿಹೋಗಿ, ಅಲ್ಲಿಯೆ ಇದ್ದ ಮರದ ಕೊಂಬೆಯ ಮೇಲೆ ಕುಳಿತುಕೊಂಡಿತು.

ಮತ್ತೆ ಆಶ್ಚರ್ಯಚಕಿತನಾದ ವ್ಯಾಪಾರಿ, “ಹಾಗದರೆ ನೀನು ನಿಜವಾಗಿಯೂ ಸಾಯಲಿಲ್ಲ, ನನ್ನನ್ನು ಮೊಸಗೋಳಿಸಲು ಸತ್ತಂತೆ ನಾಟಕವಾಡಿದೆ, ಯಾಕೆ ಹೀಗೆ ಮಾಡಿದೆ” ಎಂದು ಗಿಳಿಯನ್ನು ಕೇಳಿದ. ಅದಕ್ಕೆ ಗಿಳಿ, “ನನ್ನ ತವರಿನ ಆ ಗಿಳಿ ನನಗೆ ಒಂದು ಮುಖ್ಯವಾದ ಸಂದೇಶವನ್ನು ಕಳಿಸಿತ್ತು”, ಎಂದಿತು. ಇನ್ನೂ ಆಶ್ಚರ್ಯದಿಂದ, “ಏನದು ಸಂದೇಶ ಆ ಗಿಳಿ ನಿನಗೆ ಕಳಿಸಿದ್ದು” ಎಂದ ವ್ಯಾಪಾರಿ. ಅದಕ್ಕೆ ಗಿಳಿ ಹೀಗೆಂದಿತು,” ನಾನು ಈ ಪಂಚರದಿಂದ ಪಾರಾಗಬೇಕಾದರೆ, ನಾನು ಬದುಕಿದ್ದಂತೆ ಸಾಯಬೇಕು, ಎಂಬುದೇ ಆ ಗಿಳಿಯ ಸಂದೇಶ”.

ಈ ಕತೆಯನ್ನು ನಾನು, ಡಾ.ವೆಯ್ನ್ ಡೈಯರ್ (Dr. Wayne Dyer) ಅವರ ಭಾಷಣದಲ್ಲಿ ಕೇಳಿದ್ದು.