ಅಮರಳಾದಳು ಓಬವ್ವ ಚಿತ್ರದುರ್ಗದ ಓಬವ್ವ ಡಿಸೆಂಬರ್ 21, 2007
Posted by Bala in ಬದುಕು.Tags: ಒನಕೆ ಓಬವ್ವ
add a comment
ನಾಗರಹಾವು ಚಿತ್ರದ “ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ”, ಗೀತೆಯನ್ನು ಗುನುಗಿಕೊಳ್ಳುವಾಗಲೆಲ್ಲಾ, “ಸತ್ತವರನ್ನು ಎಳೆದು ಹಾಕುತ ಮತ್ತೆ ನಿಂತಳು ಹಲ್ಲು ಮಸೆಯುತ”, ಎಂಬ ಸಾಲಿಗೆ ಬಂದಾಗ ಮನಸ್ಸು ಗದ್ಗದಿತವಾಗುತ್ತದೆ, ಹಾಡು ಮುಂದುವರಿಯದೆ ಗಂಟಲಲ್ಲೆ ಹೂತುಹೋಗುತ್ತದೆ. ಒಂದು ಅಸಾಮಾನ್ಯವಾದ ವ್ಯಕ್ತಿತ್ವ ಕಣ್ಣ ಮುಂದೆ ಹಾದುಹೋಗಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಮಾಂತ್ರಿಕ ನಿರ್ದೇಶಕ ಪುಟ್ಟಣ್ಣ ಕಣಗಾಲರ ನಾಗರಹಾವು ಚಿತ್ರದಲ್ಲಿ, ಜಯಂತಿಯವರು ತಮ್ಮ ಅಮೋಘವಾದ ಅಭಿನಯದಿಂದ, ನಿಜವಾದ ಓಬವ್ವನನ್ನೂ ನಮ್ಮ ಕಣ್ಣ ಮುಂದೆ ಜೀವಂತವಾಗಿಟ್ಟಿದ್ದಾರೆ. ಈ ಹಾಡನ್ನು ನೆನೆಸಿಕೊಂಡರೆ ಮೈಯೆಲ್ಲಾ ಜುಮ್ಮೆನ್ನುತ್ತದೆ, ರೋಮರೋಮಗಳು ನಿಮಿರಿನಿಂತು, ಕೊನೆಗೆ ಓಬವ್ವನ ಸಾವು ನಮ್ಮ ಕಣ್ಣಲ್ಲಿ ನೀರು ತುಂಬಿಸುತ್ತದೆ. ಕೆಲವೇ ಗಂಟೆಗಳಲ್ಲಿ ಮಿಂಚಿ ಮರೆಯಾದ ಓಬವ್ವ ಕನ್ನಡ ನಾಡಿನ ಇತಿಹಾಸದಲ್ಲಿ ಯಾವಾಗಲು ಮಿನುಗುವ ನಕ್ಷತ್ರ.
ಇಲ್ಲಿ ಒಂದು ವಿಶಯವನ್ನು ನಾವು ಗಮನಿಸಬೇಕು, ಒಬ್ಬ ಸೈನಿಕ ಮೊದಲೆ ತಿಳಿದ ಯುದ್ದಕ್ಕೆ ಹೋಗಿ ವೀರೊಚಿತವಾಗಿ ಹೋರಾಡಿ ವೈರಿಗಳನ್ನು ನಾಶಪಡಿಸಿ, ಕೊನೆಗೆ ತಾನೂ ಸಾವನ್ನಪ್ಪುವುದು ವಿಶೇಷವಾದ ವ್ಯಕ್ತಿತ್ವವೇ ಹೌದು. ಆದರೆ ಇಲ್ಲಿ, ತಾನು ಯುದ್ದಕ್ಕೆ ಹೊರಡಬೇಕು, ಅಲ್ಲಿಂದ ತಾನು ಹಿಂದೆ ಬರದೇ ಇರಬಹುದು ಎಂಬುದು ಸೈನಿಕನಿಗೆ ಮೊದಲೇ ತಿಳಿದಿರುತ್ತದೆ ಮತ್ತು ಸೈನಿಕ ಅದಕ್ಕೆ ಬೇಕಾದ ಮಾನಸಿಕ ಸಿದ್ದತೆಯೊಂದಿಗೆ ಯುದ್ದಕ್ಕೆ ಹೊರಡುತ್ತಾನೆ. ಸೈನಿಕನ ವೀರೊಚಿತವಾದ ಹೋರಾಟ ಮಹಾನ್ ಕಾರ್ಯವೇ ಸರಿ, ಅದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುವುದು, ಓಬವ್ವ ಒಬ್ಬ ಸಾಮಾನ್ಯ ಮಹಿಳೆ, ಒಂದು ಕ್ಷಣದ ಹಿಂದೆ ತೃಪ್ತಿಯಿಂದ ತನ್ನ ಗಂಡನಿಗೆ ಊಟ ಬಡಿಸಿ, ಆತನಿಗೆ ಕೊಡಲು ನೀರಿಲ್ಲದಿರುವುದನ್ನು ಗಮನಿಸಿದಂತ ಸಾಮಾನ್ಯ ಹೆಣ್ಣು ಮಗಳು.ಆದರೆ ವೈರಿಯ ಪಿಸುಮಾತನ್ನು ಕೇಳಿದೊಡನೆಯೆ ಎಂತಹ ಅಸಾಮಾನ್ಯ ಸ್ಥಿತಿಗೇರಿದಳೆಂದರೆ, ಸ್ವತಃ ಅಕೆಯೆ ಹಿಂದೆ ಎಂದೂ ಎಣಿಸಿರದಂತಹ ಅಸಾಮಾನ್ಯ ಸ್ಥಿತಿ. ಆಕೆ ಹಿಡಿದದ್ದು ಆಕೆ ಯಾವಗಲೂ ಬಳಸುವ ಒನಕೆ, ಈ ಒನಕೆ ಕೂಡ ಅಸಾಮಾನ್ಯ ಆಯುಧವಾಗಿ ಪರಿಣಮಿಸಿತು. ಇದೆಲ್ಲಾ ನಡೆಯುವುದು ಕೇವಲ ಕ್ಷಣಗಳ ಅಂತರದಲ್ಲಿ. ಒಂದು ಸಾಮಾನ್ಯ ಚೇತನ ಇನ್ನೊಂದು ಕ್ಷಣದಲ್ಲಿ ಅಸಾಮಾನ್ಯ ಚೀತನವಾಗಿ ಬೆಳೆಯುವುದು ನಿಜಕ್ಕೂ ಆಶ್ಚರ್ಯ ಹುಟ್ಟಿಸುವಂತಹುದಾದರೂ ಅದು ಸಾಧ್ಯ ಎಂದು ತೋರಿಸುತ್ತಿದೆ.