ಗುಂಗಿನ ಮತ್ತು ನವೆಂಬರ್ 23, 2007
Posted by Bala in ಬದುಕು.Tags: ಆರೊಗ್ಯ
add a comment
ಇವತ್ತು ಯಾಕೊ ಗೊತ್ತಿಲ್ಲ ಬೆಳಗಿನಿಂದ ’ಗುಂಗು’ ಪದದ ಮತ್ತೇರಿದೆ ನನಗೆ. ಯಾರ್ಯಾರ್ಗೊ ಎನೇನಕ್ಕೊ ಮತ್ತೇರುತ್ತಂತೆ, ನನಗ್ಯಾಕೆ ಗುಂಗು ಎಂಬ ಪದದ ಬಗ್ಗೆ ಮತ್ತೇರಬಾರದು, ನೀವೆ ಹೇಳಿ ಇದರಲ್ಲೇನಾದರೂ ತಪ್ಪಿದ್ದರೆ. ನೀವೇನಾದರೂ ಇದರಲ್ಲಿ ತಪ್ಪಿದೆ ಎಂದರೆ, ನಮ್ಮ ಪ್ರೀತಿಯ ಯಂಡ್ಕುಡುಕ ರತ್ನ ಹೇಳ್ದಂಗೆ, ಮೂಗ್ ಮೂರ್ ಚೂರಾಗಿ ಕುಯಿಸ್ಕಂತೀನಿ ನಿಮ್ಮಾತಿಗ್ ಆಡ್ಡ್ ಬಂದ್ರೆ. ಆಲ್ಲಾ ಗುಂಗು ಅಂದ್ರೇನು ಸಾಮಾನ್ಯ ಅಂತೀರ, ಪ್ರಪಂಚದಲ್ಲೀರುವವರೆಲ್ಲಾ ಒಂದಲ್ಲಾ ಒಂದು ರೀತಿ ಗುಂಗಿನಲ್ಲಿರುವವರೇ, ಒಂದೇ ವ್ಯತ್ಯಾಸ ಎಂದರೆ ಗುಂಗು ಯಾವುದರಿಂದ ಉಂಟಾಯಿತು ಎಂಬುದು.
ಯಾರೊ ಕೆಲವರು ಒಂದು ಸುಂದರ ಕವಿತೆ ಓದಿ, ದಿನವಿಡಿ ಅದರ ಗುಂಗಿನಲ್ಲಿದ್ದರೆ, ಕೆಲವರು ಹುಚ್ಚು ಹಿಡಿಸುವ ಸಿನೇಮಾ ಗೀತೆಗಳ ಗುಂಗಿನಲ್ಲಿರುತ್ತಾರೆ. ಮತ್ತೆ ಕೆಲವರು ಸುಂದರವಾದ ಕಾದಂಬರಿಯನ್ನು ಒದಿ ಅಲ್ಲಿರುವ ಪಾತ್ರದೊಂದಿಗೆ ತಮ್ಮನ್ನೇ ಹೊಲಿಸಿಕೊಂಡು ಅದೇ ಗುಂಗಿನಲ್ಲಿರುತ್ತಾರೆ. ಇನ್ನೂ ಕೆಲವರಿಗೆ ಬರೆಯೊದರಲ್ಲಿ ಗುಂಗು. ಇಲ್ಲಿ ವಿವರಿಸಿದಂತ ಗುಂಗನ್ನು ತನ್ಮಯತೆ, ಪರವಶತೆ ಎಂದೂ ಕೂಡಾ ಕರೆಯುತ್ತಾರೆ. ಈ ಬಗೆಯ ಗುಂಗನ್ನು ಯಾರು ಎಷ್ಟು ಬೇಕಾದರೂ ಪಡೆಯಬಹುದು , ಯಾವಾಗ ಬೇಕಾದರೂ ಹೊಂದಬಹುದು, ಕಾಸು ಕರ್ಚಿಲ್ಲಾ (ಲೈಬ್ರರಿ ಬುಕ್ ಒದುವುದರಿಂದ!!, ಪುಕ್ಕಟ್ಟೆ ಬ್ಲಾಗ್ ಬರಿಯೊದರಿಂದ!!) ಎಲ್ಲಕ್ಕಿಂತಾ ಹೆಚ್ಚಾಗಿ ಆರೊಗ್ಯಕ್ಕೇನೂ ತೊಂದರೆಯಿಲ್ಲ ಬದಲಾಗಿ ವ್ಯಕ್ತಿಯ ಅರೋಗ್ಯ ಉತ್ತಮ ಗೊಳ್ಳಬಹುದು. ಇಷ್ಟೆಲ್ಲಾ ಪ್ರಯೊಜನಗಳಿದ್ದರೂ ಈ ಬಗೆಯ ಗುಂಗಿಗೆ ಅಂಟಿಕೊಳ್ಳುವವರೂ ನಿಜಕ್ಕೂ ಅಲ್ಪಸಂಖ್ಯಾತರು.
ಆದರೆ ಗುಂಗು ಪದದ ವ್ಯಾಪಕವಾದ ಅರ್ಥ ಅಮಲು, ಮಾದಕ ಪದಾರ್ಥಗಳ ಸೇವನೆಯಿಂದ ಉಂಟಾಗುವ ಜೊಂಪು. ಈ ಬಗೆಯ ಗುಂಗನ್ನು ಪಡೆಯಲು ಕಾಸು ಖರ್ಚು , ಅರೋಗ್ಯಕ್ಕೂ ಹಾನಿಕರ. ಹಾಗಿದ್ದರೂ ಈ ಗುಂಗಿಗೆ ಅಂಟಿಕೊಂಡಿರುವರ ಸಂಖ್ಯೆ ಹೆಚ್ಚು (ಮಹಾಸಂಖ್ಯಾತರು ಎನ್ನಬಹುದೇನೊ). ಗುಂಡಿನ ಮತ್ತೇ ಘಮ್ಮತ್ತು, ಅಳತೇ ಮೀರಿದರೇ ಅಪತ್ತು. ಸಾಮಾನ್ಯವಾಗಿ ಆಳತೆಗಿಂತಾ ಹೆಚ್ಚಾಗಿ ಕುಡಿದವರು , ಬೆಳಿಗ್ಗೇ ಎದ್ದಾಗ ಇನ್ನೂ ಹ್ಯಾಂಗೊವರ್ ನಲ್ಲೇ ಇರುತ್ತಾರೆ. ಈ ಬಗೆಯ ಹ್ಯಾಂಗೊವರ್ ಒಂದುರೀತಿ ಮನಸ್ಸಿಗೆ ಅಹಿತವಾಗಿರುತ್ತದೆ, ಯಾವ ಕೆಲಸ ಮಾಡಲೂ ಮನಸ್ಸಿರುವುದಿಲ್ಲ. ಒಟ್ಟಾರೆ ಹೇಳಬೇಕೆಂದರೆ ಮಿತವಾಗಿ ಕುಡಿಯುವಾಗ ಸಿಗುವ ಗುಂಗು ಉತ್ತಮವಾದರೆ, ಮಿತಿಯಿಲ್ಲದೇ ಕುಡಿದಾಗ ಉಂಟಾಗುವ ಹ್ಯಾಂಗೊವರ್ ಅಧಮ.
ಹ್ಯಾಂಗೊವರ್ ಹೇಗೆ ಉಂಟಾಗುತ್ತದೆ ಎಂಬುದನ್ನು ಗಮನಿಸಿದರೆ ಮಿತಿಯಿಲ್ಲದ ಕುಡಿತ ಕಡಿಮೆಯಾಗಬಹುದು. ಅಲ್ಕೊಹಾಲ್ ಒಂದು ಬಗೆಯ ವಿಷ, ನಮ್ಮ ದೇಹದಲ್ಲಿ ಎಲ್ಲ ಬಗೆಯ ವಿಷಗಳನ್ನು ಅರಗಿಸುವುದು ಲಿವರ್‍ನ ಕೆಲಸ. ಮಿತವಾಗಿ ಕುಡಿದಾಗ ಲಿವರ್ , ಅಲ್ಕೋಹಾಲನ್ನು ಅರಗಿಸಿಕೊಳ್ಳುತ್ತದೆ. ಹಾಗಲ್ಲದೆ ಪ್ರತಿಬಾರಿ ಈ ರೀತಿ ವಿಷವನ್ನು ಅರಗಿಸಿಕೊಳ್ಳುವ ಲಿವರ್‍ಗೆ ಮತ್ತೆ ಚೇತರಿಸಿ ಕೊಳ್ಳಲು ಸಮಯ ಬೇಕು. ಆದರೆ ಮಿತಿಮೀರಿ ಕುಡಿದಾಗ, ಇರುವ ಸಣ್ಣ ಲಿವರ್ ತನಗಾದಷ್ಟು ಅಲ್ಕೊಹಾಲನ್ನು ಅರಗಿಸ್ಕೊಂಡು ಸುಸ್ತಾದಗ, ಮಿಕ್ಕ ಅಲ್ಕೊಹಾಲ್ ಇನ್ನೂ ರಕ್ತದಲ್ಲಿ ಸಂಚರಿಸುತ್ತಿರುತ್ತದೆ. ರಕ್ತದಲ್ಲಿ ಸಂಚರಿಸುತ್ತಿರುವ ಈ ಅಲ್ಕೊಹಾಲ್ ಹ್ಯಾಂಗೋವರ್‍ಗೆ ಕಾರಣ. ಒಟ್ಟಾರೆ ನೀವು ಕುಡಿದಿದ್ದನ್ನು ಅರಗಿಸಿಕೊಳ್ಳುವುದರಲ್ಲಿ ನಿಮ್ಮ ಲಿವಿರ್ ಸೊತಿದೆ ಎಂದು ಹೇಳಬಹುದು. ದಿನಾಗಲೂ ಮಿತಿಯಿಲ್ಲದೇ ಕುಡಿದು ಲಿವರ್‍ನ ಮೇಲೆ ಒತ್ತಡ ಹೇರಿದರೆ ಲಿವರ್ಹೋಸಿಸ್ ಎಂಬ ಖಾಯಿಲೆ ಬರಬಹುದು. ನಮಗೆ ಗೊತ್ತಿಲ್ಲದೇ ಎಷ್ಟೊ ಬಗೆಯ ವಿಷಗಳು ನಮ್ಮ ಹೊಟ್ಟೆಯನ್ನು ಸೇರುತ್ತಿರುತ್ತವೆ , ಇವೇ ನಮ್ಮ ಲಿವರ್ರಿಗೆ ಸಾಕಷ್ಟು ಕೆಲಸ ಕೊಡುತ್ತಿರುವಾಗ, ನಮಗೆ ಗೊತ್ತಿದ್ದು ಅಲ್ಕೊಹಾಲ್ ನಂತಹ ವಿಷವನ್ನು ಯಾಕೆ ನಮ್ಮ ದೇಹದೊಳಗೆ ಸೇರಿಸಿ, ಇರುವ ಒಂದು ಸಣ್ಣ ಲಿವರ ಮೇಲೆ ಹೆಚ್ಚು ಒತ್ತಡ ಉಂಟುಮಾಡಬೇಕು.