jump to navigation

ಅಕ್ಕಿಯೊಳಗನ್ನವನು ಮೊದಲಾರು ಕಂಡವರು ಡಿಸೆಂಬರ್ 25, 2007

Posted by Bala in ಬದುಕು.
Tags: ,
add a comment

ಅಕ್ಕಿಯೊಳಗನ್ನವನು ಕಂಡುಹಿಡಿದ ಆ ಅನಾಮದೇಯ ಮಹಾನ್ ವ್ಯಕ್ತಿಗೆ ಕೊಟಿ ನಮಸ್ಕಾರ. ಇವತ್ತು ಅಕ್ಕಿಯಿಲ್ಲದೇ ಬದುಕೇ ಇಲ್ಲಾ ಎಂದು ಹೇಳಬಹುದು, ಅಕ್ಕಿ ನಮ್ಮ ಬದುಕಿನಲ್ಲಿ ಎಷ್ಟು ಹಾಸುಹೊಕ್ಕಾಗಿದೆಯೆಂದರೆ ನಾವು ದಿನದ ಮೂರು ಹೊತ್ತು ಒಂದಲ್ಲಾ ಒಂದು ಅಕ್ಕಿಯಿಂದಾದ ಅಹಾರವನ್ನು ತಿನ್ನುತ್ತೇವೆ. ಅಕ್ಕಿಯಿಂದ ಮಾಡಿರದ ಆಹಾರವನ್ನು ಬಿಟ್ಟು ನಮ್ಮ ಊಟವನ್ನು ನೆನೆಸಿಕೊಳ್ಲಲು ಸಾಧ್ಯವಿಲ್ಲ. ಯಾವುದೇ ದೇಶದ, ಯಾವುದೇ ಬಗೆಯ ಊಟಮಾಡಿದರು, ಅನ್ನವಿಲ್ಲದೆ ನಮಗೆ ಊಟ ಸಂಪೂರ್ಣವಾದಂತೆನಿಸುವುದಿಲ್ಲ, ಕನಿಷ್ಟ ಪಕ್ಷ ಕೊನೆಯಲ್ಲಿ ಮೊಸರನ್ನವಿರಲೇಬೇಕು. ನಮಗೆ ಮೃಷ್ಟಾನ್ನ ಭೋಜನವಿಲ್ಲದಿದ್ದರೂ ತೊಂದರೆಯಿಲ್ಲ, ಅನ್ನ, ತುಪ್ಪಾ ಉಪ್ಪು ಮೆಣಸಿದ್ದರೆ ಸಾಕು, ಮನಃಪೂರ್ವಕವಾಗಿ ಊಟಮಾಡಲು.

ದ್ರಾವಿಡದ ವಾರಿ ಪದ ತಮಿಳಿನಲ್ಲಿ ಅರಿಸಿ ಯಾಗಿ ಕನ್ನಡದಲ್ಲಿ ಅಕ್ಕಿಯಾಗಿದೆ ಎನ್ನುತ್ತಾರೆ. ದ್ರಾವಿಡದ ವಾರಿ ಪದದಿಂದಲೇ ಸಂಸ್ಕೃತದ ವ್ರೀಹಿ (ಭತ್ತ, ಅಕ್ಕಿ ಅಥವಾ ಧಾನ್ಯ) ಪದ ಬಂದಿರಬಹುದು ಎನ್ನುತ್ತಾರೆ. ವೇದಗಳಲ್ಲಿ ಅಕ್ಕಿಯನ್ನು ಕುರಿತಾದ ಮಂತ್ರಗಳಿವೆ. ಕುಮಾರವ್ಯಾಸನ ಭಾರತಕಥಾಮಂಜರಿಯಲ್ಲಿ, ಭೀಮ ಬಕಾಸುರನಿಗಾಗಿ ಬಂಡಿ ಊಟವನ್ನು  ಕೊಂಡೊಯ್ಯಲು ಸಿದ್ದನಾಗಿ, ಬೀಳ್ಕೊಡಲು ಬಂದ ಜನರೆಲ್ಲ ಹೋದಮೇಲೆ, ಅನ್ನದ ಉಂಡೆಯನ್ನು ಮಾಡಿ ಸಾರಿನಲ್ಲಿ ಅದ್ದಿ ಮೇಲಕ್ಕೆಸದು ಬಾಯನ್ನು  ಅಗಲಿಸಿ ಕ್ಯಾಚ್ ಹಿಡಿಯುತ್ತಾ ಊಟ ಮಾಡಿದನೆಂದು ಓದಿದ ನೆನಪು.

ಅಕ್ಕಿಯಿಂದಾದ ಆಡುಗೆಗಳೆಂದರೆ, ಇಡ್ಲಿ , ದೋಸೆ (ದೋಸೆಯಲ್ಲಿ ಹಲವಾರು ಬಗೆ , ಮಸಾಲೆ ದೋಸೆ, ಈರುಳ್ಳಿದೋಸೆ, ಉತ್ತಾಪ, ಹಸಿರುಕಾಳಿನ ದೋಸೆ, ಇತ್ಯಾದಿ), ಅಕ್ಕಿರೊಟ್ಟಿ,, ಅನ್ನ (ಅನ್ನವನ್ನು ಮೂಲವಾಗುಳ್ಳ ಕೆಲವು ಆಡಿಗೆಗಳೆಂದರೆ, ಚಿತ್ರಾನ್ನ, ಮೊಸರನ್ನ, ಬಿಸಿಬೇಳೆಬಾತ್, ವಾಂಗೀಬಾತ್, ಪುಳಿಯೊಗರೆ ಇತ್ತ್ಯಾದಿ). ಅಕ್ಕಿಯಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳೆಂದರೆ ಫೈಬರ್, ಶರ್ಕರ, ಪ್ರೋಟೀನ್, ವಿಟಮಿನ್ ಬಿ , ಇ ಮುಂತಾದುವುಗಳು.

ಅಕ್ಕಿ ನಮ್ಮ ಸಂಸ್ಕೃತಿಯಲ್ಲಿ ಅತಿ ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ. ಮಗುವಿಗೆ ಉಣಿಸುವ ಮೊದಲ ಊಟದ ಶಾಸ್ತ್ರ ಅನ್ನಪ್ರಾಶನ. ಮದುವೆಯಲ್ಲಂತೂ ತುಂಬಿದ ತಟ್ಟೆಗಳಲ್ಲಿ ಅಕ್ಕಿ ಎಲ್ಲೆಲ್ಲೂ ತಾಂಡವವಾಡುತ್ತಿರುತ್ತದೆ. ಗಂಡು ಹೆಣ್ಣು ಒಬ್ಬರ ತಲೆಯ ಮೇಲೆ ಇನ್ನೊಬ್ಬರು ಅರಿಶಿಣ ಹಚ್ಚಿದ ಅಕ್ಕಿಯನ್ನು ಎರಡುಕೈಗಳಲ್ಲಿ ಹಿಡಿದು ಹಾಕುವುದು. ಧಾರೆಯೆರೆಯಲು ಬಂದವರು, ಹಾಲನ್ನು ಬಿಟ್ಟನಂತರ ಅಕ್ಷತೆಯನ್ನು ಗಂಡು ಹೆಣ್ಣಿನ ಮೇಲೆ ಹಾಕುವುದು. ತಾಳಿಕಟ್ಟುವ ಸಮಯದಲ್ಲಿ ಗಟ್ಟಿ ಮೇಳದೊಂದಿಗೆ ಮದುವೆಯಲ್ಲಿ ನೆರೆದೆದ್ದ ಎಲ್ಲರೂ ಅಕ್ಷತೆ ಯನ್ನು ಗಂಡು ಹೆಣ್ಣಿನ ಮೇಲೆ ಎರಚುವುದು. ಇಡೀ ಮದುವೆಮನೆಯಲ್ಲಿ ಅಕ್ಕಿ ಎಲ್ಲೆಲ್ಲೂ ಎರಚಾಡಿರುವುದು ಶುಭದ ಸಂಕೇತ. ಅಕ್ಕಿ ಯನ್ನು ಮದುವೆಯಲ್ಲಿ ಉಪಯೋಗಿಸಿರುವುದು ಮದುವೆಯಾದವರು ಸಂತಾನವನ್ನು ಮುಂದುವರೆಸಲಿ ಎಂಬ ಪಲವತ್ತತೆಯ ಸಂಕೇತವಾಗಿ ಎನ್ನುತ್ತಾರೆ. ಕೊನೆಗೆ ಸತ್ತವರಿಗೆ ಇಡುವ ಪಿಂಡ ಅಕ್ಕಿಯಿಂದ ಮಾಡಿದ್ದು.