jump to navigation

ನೆಲ ಇನ್ನೂ ಹಸಿಯಾಗಿದೆ ನವೆಂಬರ್ 2, 2017

Posted by Bala in ಹಾಸ್ಯ, ಹರಟೆ.
add a comment

ಪೋಲಿಸನೊಬ್ಬ ತನ್ನ ಫೋನ್ ತೆಗೆದು ಠಾಣೆಗೆ ಫೋನ್ ಹಚ್ಚಿದ. ಅತ್ತಲಿಂದ ಇನ್ಸ್ಪೆಕ್ಟರ್ ಧ್ವನಿ ಕೇಳಿಸಿತು

ಪೋಲಿಸು: ಸಾರ್, ಇಲ್ಲೊಂದು ಕೊಲೆ ನಡೆದಿದೆ

ಇನ್ಸ್ಪೆಕ್ಟರ್: ಯಾಕೆ? ಎನಾಯ್ತು?

ಪೋಲಿಸು: ಸಾರ್, ಒಂದು ಹೆಂಗಸು, ಆಗ ತಾನೆ ಒರೆಸಿದ ನೆಲದ ಮೇಲೆ ನಡೆದಾಡಿದ ತನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಸಾರ್

ಇನ್ಸ್ಪೆಕ್ಟರ್: ಓ ಮೈ ಗಾಡ್! ಸರಿ, ಆ ಹೆಂಗಸನ್ನು ಅರೆಸ್ಟ್ ಮಾಡಿದೆಯಾ

ಪೋಲಿಸು (ಸ್ವಲ್ಪ ಹಿಂಜರಿಕೆಯ ದ್ವನಿಯಿಂದ): ಸಾರ್, ನೆಲ ಇನ್ನೂ ಹಸಿಯಾಗಿದೆ ಸಾರ್

ಕೋಳಿ ಏನು ತಪ್ಪು ಮಾಡಿತ್ತು? ಡಿಸೆಂಬರ್ 31, 2010

Posted by Bala in ಹಾಸ್ಯ, ಹರಟೆ.
5 comments

ಶಾಂತಪ್ಪ ಪ್ರೀತಿಯಿಂದ ಕೊಂಡು ತಂದ ಗಿಣಿ, ಬಾಯಿ ಬಿಟ್ಟರೆ ಬರೀ ಅವಾಚ್ಯ ಶಬ್ದಗಳನ್ನೇ ಹೊರಡಿಸುತಿತ್ತು. ಆ ಗಿಣಿ ಒಮ್ಮೆ ಉಪಯೋಗಿಸಿದ ಪದವನ್ನು ಮತ್ತೆ ಉಪಯೋಗಿಸದೆ ಐದು ನಿಮಿಷಗಳ ಕಾಲ ಸತತವಾಗಿ ಕೆಟ್ಟಪದಗಳನ್ನು ಉಪಯೊಗಿಸಿ ಮಾತನಾಡಬಲ್ಲುದಾಗಿತ್ತು. ಶಾಂತಿ ಪ್ರಿಯನಾದ ಶಾಂತಪ್ಪನಿಗೆ, ಗಿಣಿ ಮಾರುವಾತ ಮೋಸಮಾಡಿದ್ದರ ಅರಿವಾದರೂ, ಈಗ ಏನೂ ಮಾಡುವಂತಿರಲಿಲ್ಲ. ಕಾಲಾಂತರದಲ್ಲಿ ಗಿಳಿ ಕೆಟ್ಟ ಮಾತಾಡುವದನ್ನು ಬಿಡಬಹುದು ಎಂದು ನಂಬಿ, ಗಿಳಿಯನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡು ಸಾಕುತಿದ್ದನು.

ದಿನಗಳು ಉರುಳಿದರೂ ಗಿಣಿಯ ಮಾತಿನಲ್ಲಿ ಏನೂ ಬದಲಾವಣೆ ಯಾಗಲಿಲ್ಲ. ಒಮ್ಮೆ ಶಾಂತಪ್ಪ ದಣಿದು ಮನೆಗೆ ಬಂದಾಗ, ಗಿಣಿ, ಎಂದಿನಂತೆ ತನ್ನ ಕೆಟ್ಟ ಪದಗಳನ್ನು ಉಪಯೋಗಿಸ ಮಾತನಾಡತೊಡಗಿತು. ಕೋಪ ಬಂದ ಶಾಂತಪ್ಪ, ಗಿಣಿಯ ಕತ್ತನ್ನು ಹಿಡಿದು ಜೋರಾಗಿ ಅಲ್ಲಾಡಿಸಿ, “ಕೆಟ್ಟ ಪದವನ್ನು ಉಪಯೋಗಿಸುವುದನ್ನು ಬಿಟ್ಟು ಬಿಡೋ” ಎಂದು ಗದರಿದನು. ಗಿಣಿ ಇನ್ನಷ್ಟು ರೋಷಗೊಂಡು ಶಾಂತಪ್ಪನನ್ನು ಬಯ್ಯತೊಡಗಿತು. ಅದಕ್ಕೆ ಶಾಂತಪ್ಪ, ಇರು ನಿನಗೆ ಮಾಡ್ತೀನಿ ಎಂದು, ಗಿಣಿಯನ್ನು ತೆಗೆದು ಒಂದು ಪೆಟ್ಟಿಗೆಯಲ್ಲಿ ಅದನ್ನಿತ್ತು ಬಾಗಿಲು ಮುಚ್ಚಿದ್ದನು. ಕೋಪದಿಂದ ಗಿಣಿ ಒಳಗಡೆ ಒದರಾಡಿ, ತನ್ನ ಉಗುರಿನಿಂದ ಪೆಟ್ಟಿಗೆಯ ಬಾಗಿಲನ್ನು ಪರಚತೊಡಗಿತು. ಶಾಂತಪ್ಪ ಅದರ ಗಲಾಟೆಯನ್ನು ಕೇಳಲಾರದೆ ಪೆಟ್ಟಿಗೆಯ ಬಾಗಿಲನ್ನು ತೆರೆದ, ಹೊರಬಂದ ಗಿಣಿ, ಶಾಂತಪ್ಪನನ್ನು ವಾಚಾಮ ಗೋಚರವಾಗಿ ಬಯ್ಯತೊಡಗಿತು, “ಏನೋ ನನ್ನೇ ಕೂಡಿ ಹಾಕ್ತಿಯೇನೋ? ಎಷ್ಟೋ ಕೊಬ್ಬು ನಿನಗೆ? ನಿಮ್ಮಜ್ಜಿ $#@^*()&……”. ಇದನ್ನು ಕೇಳಿಸಿಕೊಂಡ ಶಾಂತಪ್ಪನ ಕೋಪ ತಾರಕಕ್ಕೇರಿ, ಗಿಣಿಯನ್ನು ಹಿಡಿದು ಅಡುಗೆಮನೆಯಲ್ಲಿದ್ದ ಫ್ರಿಡ್ಜ್ ನ ಮೇಲ್ಭಾಗವಾದ ಫ್ರಿಜರ್ ಬಾಗಿಲು ತೆಗೆದು ಅದರೊಳಗೆ ಗಿಣಿಯನ್ನ ಒಳಗೆ ಎಸೆದು, ಬಾಗಿಲು ಮುಚ್ಚಿದ. ಸ್ವಲ್ಪ ಹೊತ್ತು ಒದರಾಡಿದ ಗಿಣಿ, ನಂತರ ಶಾಂತವಾಯಿತು.

ಸ್ವಲ್ಪ ಹೊತ್ತು ಏನು ಶಬ್ದ ಬಾರದಿದ್ದಾಗ, ಆಶ್ಚರ್ಯದಿಂದ ಶಾಂತಪ್ಪ ಫ್ರೀಜೆರ್ ಬಾಗಿಲು ತೆರೆದ, ಗಿಣಿ ಆತನ ತೆರೆದ ಬಾಹುವಿನ ಮೇಲೆ ಮೆಲ್ಲನೆ ನಡೆದು, “ಅಯ್ಯ, ಇದುವರೆವಿಗೂ ನಿನಗೆ ನಾನು ತುಂಬಾ ತೊಂದರೆ ಕೊಟ್ಟೆ, ಇನ್ನು ಮುಂದೆ ಬಾಯಿ ತಪ್ಪಿಯೂ ಕೆಟ್ಟ ಪದಗಳನ್ನು ಉಪಯೋಗಿಸುವುದಿಲ್ಲಾ” ಎಂದು ಹೇಳಿತು. ಶಾಂತಪ್ಪನ ಸಂತಸಕ್ಕೆ ಎಲ್ಲೆಯೇ ಇರಲಿಲ್ಲ, ಇಷ್ಟು ದಿನವಾದರೂ ಬದಲಾಗದಿದ್ದ ಗಿಣಿಯ ಸ್ವಭಾವ, ಇದ್ದಕ್ಕಿದ್ದಂತೆ ಬದಲಾಗಿದ್ದಕ್ಕೆ ಆಶ್ಚರ್ಯ ಪಡುತಿದ್ದಾಗ, ಗಿಳಿ ತನ್ನ ಮಾತು ಮುಂದುವರೆಸಿ, “ಅಂದಹಾಗೆ ಒಳಗಡೆ ಇದ್ದ ಕೋಳಿ ಏನು ತಪ್ಪು ಮಾಡಿತ್ತು” ಎಂದು ಕೇಳಿತು.

ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು

ಅಪ್ಪಂಥರ ಡಿಸೆಂಬರ್ 28, 2010

Posted by Bala in ಹಾಸ್ಯ, ಹರಟೆ.
add a comment

ಅಮ್ಮ: (ಕೊಪದಿಂದಿದ್ದ ಮಗನನ್ನು ಕುರಿತು) ಏನಾಯಿತೋ?

ಗುಂಡ: ಅಮ್ಮಾ ಎಲ್ಲರು ನನ್ನನ್ನ ಬಯ್ತಾರೆ, ಮೊದಲಿಗೆ ನೀನು ಬಯ್ತೀಯ, ಅಪ್ಪ ಬಯ್ತಾರೆ, ಕೊನೆಗೆ ಸ್ಕೂಲ್ನಲ್ಲಿರೋ ಎಲ್ಲ ಟೀಚರ್ಸು ಬಯ್ತಾರೆ, ನಂಗೆ ಬಯ್ಸ್ಕೊಂಡು, ಬಯ್ಸ್ಕೊಂಡು ಬೇಜಾರಾಗ್ಹೋಗಿದೆ, ಅದಕ್ಕೆ ಒಂದು ತೀರ್ಮಾನಕ್ಕೆ ಬಂದಿದ್ದೀನಿ.

ಅಮ್ಮ: ಏನ್ತೀರ್ಮಾನಕ್ಕೆ ಬಂದ್ಯೋ?

ಗುಂಡ: ನಾನು ಮದುವೆ ಆಗ್ಬೇಕು ಅಂತ ತೀರ್ಮಾನಿಸಿದ್ದೀನಿ

ಅಮ್ಮ: ಹಾಂ! ಯಾಕೋ?

ಗುಂಡ: ಮದುವೆಯಾದ್ಮೇಲೆ ನಾನು ಅಪ್ಪಂಥರ, ನನ್ನ ಹೆಂಡತಿ ಕೈಲಿ ಮಾತ್ರ ಬೈಸ್ಕೊಬೋದು!!

ಆಕೆ ಮತ್ತು ಜೀನಿ ಡಿಸೆಂಬರ್ 24, 2010

Posted by Bala in ಹಾಸ್ಯ, ಹರಟೆ.
4 comments

ಕಡಲ ತೀರದಲ್ಲಿ ನಡೆಯುತಿದ್ದ ಹೆಂಗಸೊಬ್ಬರಿಗೆ ಒಂದು ಹಳೆ ಕಾಲದ ದೀಪ ಕಂಡಿತು. ಆಕೆ ಅದನ್ನೆತ್ತಿಕೊಂಡು ಸೆರಗಿನಲ್ಲಿ ಮೂರು ಬಾರಿ ತೀಡಿದಾಗ ಅದರೊಳಗಿಂದ ಜೀನಿಯೊಂದು ಬಂದು, “ತಾಯೆ, ಸಾಮಾನ್ಯವಾಗಿ ನನ್ನನ್ನು ಕರೆದವರಿಗೆ ಮೂರು ವರ ಕೊಡುತಿದ್ದೆ, ಆದರೆ ಈಗ ಬೆಲೆ ಏರಿಕೆ, ಇನಫ್ಲೇಶನ್ ಇರುವುದರಿಂದಾಗಿ ನಿನಗೆ ಒಂದೇ ಒಂದು ವರವನ್ನು ಕೊಡುತಿದ್ದೇನೆ, ಏನು ಬೇಕಾದರೂ ಕೇಳಿಕೊ” ಎಂದು ಹೇಳಿತು.

ಆಶ್ಚರ್ಯದಿಂದ ಆಕೆ, ಏನು ಕೇಳಬೇಕೆಂಬುದರ ಬಗ್ಗೆ ಕೊಂಚ ಆಲೋಚಿಸಿ, ತನ್ನ ಕನಸುಗಳಲ್ಲಿ ಒಂದಾದ, ಭಾರತ ಮತ್ತು ಪಾಕಿಸ್ತಾನ ಗಳ ನಡುವೆ ಶಾಂತಿ ನೆಲಸುವಂತೆ ಮಾಡಲು, ಆಕೆ, ಜೀನಿಗೆ ಭೂಪಟವೊಂದನ್ನು ತೋರಿಸಿ, “ಭಾರತ ಮತ್ತು ಪಾಕಿಸ್ತಾನ ಗಳ ನಡುವೆ ಶಾಂತಿ ನೆಲೆಸುವಂತೆ ಹಾಗು ಅವರು ಮತ್ತೆಂದೂ ತಮ್ಮ ತಮ್ಮಲ್ಲೇ ಕಚ್ಚಾಡದಂತೆ ಮಾಡು” ಎಂದು ಕೇಳಿಕೊಂಡಳು.

ಜೀನಿ ಭೂಪಟವನ್ನು ನೋಡಿ, ನಂತರ ಆಕೆಗೆ ಹೇಳಿತು, “ಅಮ್ಮ, ನಾನು ಶಕ್ತಿವಂತ, ಆದರೆ ನೀನು ಕೇಳಿದ್ದು ನನ್ನ ಶಕ್ತಿ ಮೀರಿದ್ದು, ಭಾರತ ಪಾಕಿಸ್ತಾನದ ನಡುವೆ ಶಾಂತಿ ನೆಲೆಸುವಂತೆ ಮಾಡುವುದು ತುಂಬಾ ಕಷ್ಟ, ಹಾಗಾಗಿ ಇದೊಂದು ವರವನ್ನು ಬಿಟ್ಟು ಬೇರೆನಾದರು ಕೇಳಿಕೊ ಕೊಡುತ್ತೇನೆ”.

ಆಕೆ ಸರಿ ಎಂದು ಮತ್ತೊಮ್ಮೆ ಧೀರ್ಘವಾಗಿ ಆಲೋಚಿಸಿ, “ನನಗೊಬ್ಬ ಗಂಡ ಬೇಕು, ಅವನು ಹೇಗಿರಬೇಕೆಂದರೆ, ಶ್ರೀ ರಾಮಚಂದ್ರನಂತೆ ಏಕಪತ್ನಿವ್ರತಸ್ತನಾಗಿರಬೇಕು, ಶಾಂತಿ ಪ್ರಿಯನಾಗಿರಬೇಕು, ಯಾವಾಗಲು ನಗುತ್ತಿರಬೇಕು, ಅಡುಗೆಯಲ್ಲಿ ನಿಪುಣತೆ ಇರಬೇಕು, ಮನೆಕೆಲಸದಲ್ಲಿ ಸಹಾಯ ಮಾಡಬೇಕು, ನನ್ನ ಅಪ್ಪ ಅಮ್ಮ ಅವರನ್ನು ಚೆನ್ನಾಗಿ ನೋಡಿಕೊಳ್ಳ ಬೇಕು….”

ಇದನ್ನು ಕೇಳಿಸಿಕೊಂಡ ಜೀನಿ, ಒಂದು ನಿಡಿದಾದ ಉಸಿರೆಳೆದುಕೊಂಡು, ಮನಸ್ಸಿನಲ್ಲೇ “ಥೂ ನಿನ್ನ!” ಎಂದು ತನ್ನನ್ನೇ ಹಳಿದುಕೊಂಡು, “ಅಮ್ಮಾ ಆ ಭೂಪಟವನ್ನು ಇನ್ನೊಮ್ಮೆ ತೋರಿಸುವೆಯಾ” ಎಂದಿತು

ಪವಾಡ ಡಿಸೆಂಬರ್ 15, 2010

Posted by Bala in ಹಾಸ್ಯ, ಹರಟೆ.
5 comments

ನಗರವನ್ನು ಎಂದೂ ನೋಡದ ಅಪ್ಪ, ಮಗ ಬೆಂಗಳೂರಿನ ಪ್ರಸಿದ್ದ ಮಾಲೊಂದರ ಮಧ್ಯದಲ್ಲಿ ನಿಂತು, ಎಲ್ಲವನ್ನು ಬೆರಗುಕಂಗಳಿಂದ ನೋಡುತಿದ್ದರು. ಇವರ ಎದುರಿಗೆ ಹೊಳೆಯುವ ಎರಡು ಗೋಡೆಗಳು ತಂತಾನೆ ಅತ್ತಿಂದಿತ್ತ ಸರಿದದ್ದು ನೋಡಿ ಮಗ “ಅದೇನಪ್ಪಾ?” ಎಂದು ಕೇಳಿದ. ತನ್ನ ಜೀವನದಲ್ಲಿ ಎಂದೂ ಎಲಿವೇಟರ್ ಅನ್ನು ನೋಡಿರದ ಅಪ್ಪ “ನಂಗೊತ್ತಿಲ್ಲಾ ಮಗಾ” ಎಂದು ಉತ್ತರಿಸಿದ.

ಇವರಿಬ್ಬರೂ ನೋಡುತ್ತಿದ್ದಂತೆ, ವಯಸ್ಸಾದ ವೃದ್ದೆಯೊಬ್ಬರು, ಕೋಲೂರಿ ಕೊಂಡು ಬಂದು, ಸರಿದಾಡುವ ಗೋಡೆಯ ಪಕ್ಕದಲ್ಲಿದ್ದ ಗುಂಡಿಯನ್ನು ಅದುಮಿ ನಿಂತರು. ಸ್ವಲ್ಪ ಹೊತ್ತಿನ ನಂತರ ಹೊಳೆಯುವ ಗೋಡೆಗಳು ತಂತಾನೇ ಸರಿದವು, ಒಳಗಡೆ ಸಣ್ಣ ಕೋಣೆಯಿದ್ದು, ವೃದ್ದೆ ಕೋಲುರುತ್ತಾ, ನಿಧಾನವಾಗಿ ಕೋಣೆಯೊಳಗೆ ಹೋದರು. ಗೋಡೆಗಳು ತಂತಾನೆ ಮುಚ್ಚಿಕೊಂಡವು.

ಏನಾಗುವುದೋ ಎಂದು ಕಾತರದಿಂದ ಅಪ್ಪ, ಮಗ ನಿರೀಕ್ಷಿಸುತಿದ್ದಾಗ, ಗೋಡೆಗಳು ಮತ್ತೆ ತಂತಾನೆ ಸರಿದವು. ಅದೇ ಕೋಣೆಯಿಂದ, ಒಂದು ಸುಂದರ ಹುಡುಗಿ ಹೊರಬಂದು ಇವರ ಮುಂದೆಯೇ ಹಾದು ಹೋದಳು.

ತೆರೆದ ಬಾಯಿ, ಅರಳಿದ ಕಂಗಳಿಂದ ಇದನ್ನು ನೋಡಿದ ಅಪ್ಪ, ತಕ್ಷಣವೇ ಮಗನ ಭುಜ ಹಿಡಿದು, ಅವನ ಕಿವಿ ಹತ್ತಿರ ಹೋಗಿ, ” ಮಗಾ, ಜರ್ರನೆ ಹೋಗಿ ನಿಮ್ಮವ್ವನ್ನ ಕರ್ಕಂಬಾ, ಓಡು” ಎಂದ.