ಮಾತು ಮನೆ ಕೆಡಿಸ್ತು ತೂತು ಒಲೆ ಕೆಡಿಸ್ತು ನವೆಂಬರ್ 7, 2007
Posted by Bala in ಜನಪದ, ಬದುಕು, ಹಾಸ್ಯ, ಹರಟೆ.Tags: ನುಡಿ, ಮಾತು
3 comments
ಮಾತು ಮನೆ ಕೆಡಿಸ್ತು ತೂತು ಒಲೆ ಕೆಡಿಸ್ತು , ಎಂಥಾ ಮಹತ್ವವಾದ ಗಾದೆ ಇದು. ಅನವಶ್ಯಕವಾದ ಮಾತಿನ ದ್ವೇಶಿಯಾದ ನನ್ನಂತವರಿಗೆ ಇದು ವೇದ ವಾಕ್ಯ (ವೇದಕ್ಕಿಂತ ಗಾದೇನೆ ಮೇಲು ಅನ್ನೊ ಗಾದೆಯ ಪ್ರಕಾರ). ಇಲ್ಲಿ ಗಾದೆಯ ಮೊದಲನೇ ಭಾಗವನ್ನು ಮಾತ್ರವೇ ಗಮನಿಸಲಾಗಿದೆ.. ನಾವು ಜೀವನಕ್ಕೆ ಎಷ್ಟು ಬೇಕೊ ಅಷ್ಟು ಮಾತಾಡೊದರಿಂದ ಎನೂ ಅನಾಹುತ ಅಗಲ್ಲ. ಅನವಶ್ಯಕವಾಗಿ ಆಡುವ ಅಥವಾ ಆಡಿದ ಮಾತುಗಳು ಅನಾಹುತಕ್ಕೆ ಕಾರಣ. ಎಲ್ಲಿ ಬೇಡವೊ ಅಲ್ಲಿ ಏಡೆಯಿಲ್ಲದೆ ಮತಿಯಿಲ್ಲದೆ ಆಡಿದ ಮಾತುಗಳು ಖಂಡಿತ ಮನೆಯನ್ನು ಕೆಡಿಸುತ್ತದೆ, ಮನವನ್ನು ಕೆಡಿಸುತ್ತದೆ ಎಲ್ಲಕ್ಕಿಂತ ಹೆಚ್ಚಾಗಿ ಮಾತಾಡುವವನ ಅರೊಗ್ಯವನ್ನು ಕೆಡಿಸುತ್ತದೆ. ನಿಜ ಮಾತಾಡುವುದು ಮನುಷ್ಯನ ಆರೊಗ್ಯವನ್ನು ಕೆಡಿಸುತ್ತದೆ. ನಾವು ಮಾತಾಡುವಾಗ, ಉಸಿರಾಡುವುದಿಲ್ಲ. ಅಂದರೆ ನಾವು ಮಾತಾಡುತ್ತಿರುವಾಗ ಉಸಿರಾಡುವುದನ್ನು ನಿಲ್ಲಿಸಿರುತ್ತೇವೆ. ನೀವು ಶಂಕರ್ ಮಹಾದೇವನ್ ನ ಬ್ರೆತ್ ಲೆಸ್ ಎಂಬ ಹಾಡನ್ನು ಕೇಳಿದ್ದರೆ ನಾನು ಹೇಳುತ್ತಿರುವುದು ಸುಲಭವಾಗಿ ಅರ್ಥವಾಗುತ್ತದೆ. ಆತ ಸುಮಾರು ಮೂರು ನಿಮಿಶಗಳಕಾಲ ಸತತವಾಗಿ ಹಾಡನ್ನು ಹಾಡಿದ್ದಾನೆ, ಹಾಡಿನ ಕೊನೆಯಲ್ಲಿ ಆತ ದೀರ್ಘವಾಗಿ ಉಸಿರೆಳೆದುಕೊಳ್ಳುವುದನ್ನು ನೀವು ಕೇಳಿರಬಹುದು. ಹೀಗಾಗಿ, ವಾಚಾಳಿಗಳೂ ಉಸಿರಾಡುವುದನ್ನು ಮರೆತು ಮಾತಿಗಿಳಿದಿರುತ್ತಾರೆ, ಆವೇಶಭರಿತವಾದ ಮಾತು ಇನ್ನೂ ಅಪಾಯಕಾರಿ, ಯಾಕೆಂದರೆ ಇದು ಉಸಿರಾಡುವುದನ್ನು ಮರೆಸುವುದರೊಂದಿಗೆ ನಮ್ಮ ಹೃದಯದ ಬಡಿತವನ್ನು ಏರಿಸುತ್ತದೆ. ಹೀಗೆ ಉಸಿರಾಡುವುದನ್ನು ಮರೆತರೆ, ನಮ್ಮ ದೇಹಕ್ಕೆ ಸತತವಾಗಿ ಬೇಕಾಗಿರುವ ಆಮ್ಲಜನಕ ನಮ್ಮ ದೇಹವನ್ನು ಸೇರದೇ ನಮ್ಮ ಆರೋಗ್ಯ ಕೆಡಬಹುದು.
ಮನುಷ್ಯನ ದೇಹದಲ್ಲಿ ಎಲ್ಲಾ ಎರಡೆರೆಡು, ಎರಡು ಕೈ, ಎರಡು ಕಾಲು, ಎರಡು ಕಿವಿ, ಎರಡು ಕಣ್ಣು ಆದರೆ ಒಂದೇ ಬಾಯಿ. ಸಧ್ಯ ನಮಗೇನಾದರು ಎರಡು ಬಾಯಿದ್ದಿದ್ದರೆ, ನಮ್ಮ ವಾಚಾಳಿ ಮಿತ್ರರು ತಿನ್ನುವಾಗಲೂ ಮಾತು ಮುಂದುವರೆಸುತ್ತಿದರೇನೊ. ಮಾತು ಬೆಳ್ಳಿ ಮೌನ ಬಂಗಾರ, ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಗಳು ಮಾತಿನ ಬೆಲೆ ಮತ್ತು ಮಾತನ್ನು ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಹೇಳುತ್ತದೆ . ಬುದ್ಧ ಆಸೆಯೆ ದುಃಖಕ್ಕೆ ಮೂಲ ಎಂದು ಸಾರಿದ್ದರೆ, ನಾವು ಅನವಶ್ಯಕವಾದ ಮಾತೇ ದುಃಖಕ್ಕೆ ಮೂಲ ಎಂದು ಡಂಗುರ ಸಾರಿ ಹೇಳಬಹುದೇನೊ!!
ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಗಾದೆ, ಆಡಿದ ಮಾತನ್ನು ಮತ್ತೆ ಹಿಂದೆ ತೆಗೆದುಕೊಳ್ಳಲು ಅಗುವುದಿಲ್ಲ ಅದು ಕೈ ಜಾರಿದ ಮುತ್ತು ಒಡೆದಂತೆ ಎಂದು ಹೇಳುತ್ತದೆ. ಮಾತು ಹೇಗಿರಬೇಕೆಂದರೆ ನಮ್ಮ ಬಸವಣ್ಣನವರು ಈ ವಚನದಲ್ಲಿ ಹೇಳಿರುವಂತಿರಬೇಕು.
ನುಡಿದರೆ ಮುತ್ತಿನಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು
ಇದನ್ನು ಓದುತ್ತಿರುವ ವಾಚಾಳಿ ಮಿತ್ರರೆಲ್ಲಾ ನನಗೆ ಹಿಡಿ ಶಾಪ ಹಾಕಿ, “ಮಾತಿನನಗರ” ವೊಂದನ್ನು ಸ್ಥಾಪಿಸಿ, ಅಲ್ಲಿ ವಾಚಾಳಿಗಳಿಗೆ ಮಾತ್ರ ಸ್ವಾಗತ ಎಂಬ ನಿಯಮವನ್ನು ಹಾಕಿ, ಮಾತಿನ ದ್ವೇಶಿಗಳನ್ನು ಚಂದ್ರಲೋಕಕ್ಕೆ ಹೊರಗಟ್ಟುವ ಆಂದೋಲನವನ್ನು ಶುರುಮಾಡಲಿದ್ದಾರಂತೆ!!
ಕಂದನ ಬಗೆಗಿನ ಜನಪದ ಗೀತೆಗಳು ಅಕ್ಟೋಬರ್ 1, 2007
Posted by Bala in ಜನಪದ.4 comments
ಹಿಂದೆ ಒಬ್ಬ ತಾಯಿ ತನ್ನ ಮಗುವನ್ನು ’ಕಂದ ’ ಎಂದು ಕೂಗಿದ್ದನ್ನು ನಾನು ನನ್ನ ಕಿವಿಯಾರ ಕೇಳಿದಾಗ, ಏನೊ ಒಂದು ಬಗೆಯಾದ ಸಂತೊಷ. ಕಂದ ಎಂಬ ಪದವೇ ಎಷ್ಟು ಚಂದ. ಕಂದ ಎಂದರೆ ಮಗು ಎಂದು ಒಂದರ್ಥವಿದ್ದರೆ, ಕಂದ ನಮ್ಮ ಕನ್ನಡ ಛಂದಸ್ಸಿನ ಒಂದು ಪ್ರಕಾರವಾದ ಪದ್ಯ ಕೂಡ. ಏಲ್ಲೊ ಓದಿದ ನೆನಪು, ಚಂದ ಪದದ ಮೂಲ ಧಾತು ವಾದ ’ಚೆನ್’ ಶುದ್ಧ ದ್ರಾವಿಡ ಪದ ಮತ್ತು ಈ ಪದದ ಅರ್ಥ ಸುಂದರ ಎಂದು. ಸಾಮಾನ್ಯವಾಗಿ ಬೇರೆಯ ಭಾಷೆಗಳಿಂದ ಪದಗಳನ್ನು ಎರವಲು ಪಡೆಯದ ಸಂಸ್ಕೃತ, ದ್ರಾವಿಡದಿಂದ ತನ್ನದಾಗಿಸಿಕೊಂಡ ಕೆಲವು ಧಾತುಗಳಲ್ಲಿ ’ಚೆನ್’ ಕೂಡಾ ಒಂದು. ಕಂದ, ಚಂದ , ಕೂಸು ಮುಂತಾದ ಈ ಚೆಂದವಾದ ಪದಗಳು ಕನ್ನಡಿಗರ ಬಾಯಿಂದ ಕಳೆದು ಹೊಗದಿರಲಿ.
ಮಗು ವಿನ ಬಗ್ಗೆ ಜನಪದದಲ್ಲಿ ಮೂಡಿರುವ ಅತ್ಯಮೂಲ್ಯ ಭಾವನೆಗಳ ಬಗ್ಗೆ ಪುಟಗಟ್ಟಲೆ ಬರೆಯಬಹುದು. ತಾಯಿ ತನ್ನ ಮಗುವನ್ನು ವರ್ಣಿಸುವಾಗ, ಆತನ ಲೀಲೆ ಗಳ ಬಗ್ಗೆ ಹೇಳುವಾಗ ಉಪಯೊಗಿಸಿರುವ ಸುಂದರ ಪ್ರತಿಮೆಗಳು ಸರಳ ಮತ್ತು ಚಂದ. ಒಂದು ಪ್ರತಿಮೆಯನ್ನು ಇಲ್ಲಿ ವಿವರಿಸುತ್ತೇನೆ, ಮಗು ಯಾಕೆ ಅಳ್ತಾಇದ್ದಾನೆ ಎಂದು ಯಾರೊ ಕೇಳಿದಾಗ ತನ್ನ ಮಗು ಚಂಡಿ ಹಿಡಿದಿದ್ದಾನೇ ಎಂಬುದನ್ನು ಹೇಳಲು, ಆಕೆ ಒಂದು ಸುಂದರವಾದ ಪ್ರತಿಮೆ ಯೊಂದಿಗೆ ಹೇಳುತ್ತಾಳೆ, ಕಾಯದೇ ಇರುವ ಹಾಲಿನ ಕೆನೆ ಬೇಡಿ ನನ್ನ ಕಂದ ಅಳುತಿದ್ದಾನೆ. ಹಾಲಿನಲ್ಲಿ ಕೆನೆ ಮೂಡಲು, ಹಾಲನ್ನು ಕಾಯಿಸಬೇಕು, ಮಗು ಚಂಡಿ ಹಿಡಿದಾಗ ಮಗು ವನ್ನು ಸಮಾಧಾನ ಮಾಡಾಲು ಎಷ್ಟು ಕಷ್ಟ ಎಂದರೆ ಕಾಯದೇ ಇರೊ ಹಾಲಿನಲ್ಲಿ ಕೆನೆ ಹುಡುಕಿದಷ್ಟೇ ಕಷ್ಟ.. ಮಗುವಿನ ಬಗ್ಗೆ ಇರುವ ಕೆಲವು ಸುಂದರವಾದ ಜನಪದ ಗೀತೆಗಳನ್ನು ಇಲ್ಲಿ ನಿಮ್ಮ ಮುಂದೆ ಇರಿಸಲಾಗಿದೆ.
ಯಾಕಳುವೆ ಎಲೆರಂಗ ಬೇಕಾದ್ದು ನಿನಗೀವೆ
ನಾಕೆಮ್ಮೆ ಕರೆದ ನೊರೆ ಹಾಲು| ಸಕ್ಕರೆ
ನೀ ಕೇಳಿದಾಗ ಕೊಡುವೇನು||
ಯಾತಕಳುತಾನೆಂದು ಎಲ್ಲಾರು ಕೇಳ್ಯಾರು
ಕಾಯದ ಹಾಲ ಕೆನೆ ಬೇಡಿ| ಕಂದಯ್ಯ
ಕಾಡಿ ಕೈಬಿಟ್ಟು ಇಳಿದಾನ||
ಅಳುವ ಕಂದನ ತುಟಿಯು ಹವಳದ ಕುಡಿಹಂಗೆ
ಕುಡಿಹುಬ್ಬು ಬೇವಿನೆಸಳಂಗೆ| ಕಣ್ಣೋಟ
ಶಿವನ ಕೈಯಲಗು ಹೊಳೆದಂತೆ||
ಅತ್ತರೆ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ| ಕಂದನಂತ
ಮಕ್ಕಳಿರಲವ್ವ ಮನೆತುಂಬ||
ಜೋಗೂಳ ಹಾಡಿದರೆ ಆಗಲೇ ಕೇಳ್ಯಾನು
ಹಾಲ ಹಂಬಲವ ಮರೆತಾನು| ಕಂದಂಗೆ
ಜೋಗೂಳದಾಗೆ ಅತಿಮುದ್ದು||
ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ
ಎತ್ತಿಕೊಳ್ಳೆಂಬ ಹಟವಿಲ್ಲ| ನಿನ್ನಂತ
ಹತ್ತು ಮಕ್ಕಳೂ ಇರಬಹುದು||
ಆಡಿ ಬಾ ಎನ್ನ ಕಂದ ಅಂಗಳ ತೊಳೆದೇನ
ತೆಂಗಿನ ಕಾಯಿ ತಿಳಿನೀರ| ತಕ್ಕೊಂಡು
ಬಂಗಾರದ ಮೊರೆ ತೊಳೆದೇನ||
ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ
ಕೂಸು ಕಂದಯ್ಯ ಒಳ ಹೊರಗ| ಆಡಿದರೆ
ಬೀಸಣಿಗೆ ಗಾಳಿ ಸುಳಿದಾವ||