jump to navigation

ಹಾಗೇನಿಲ್ಲ….. ನವೆಂಬರ್ 25, 2008

Posted by Bala in ಬದುಕು, ಹಾಸ್ಯ, ಹರಟೆ.
2 comments

ಮೂರು ಜನ ಮಧ್ಯ ವಯಸ್ಸಿನ ಹೆಂಗಸರು ಬ್ಯೂಟಿ ಪಾರ್ಲರ್ ಒಂದರಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯುತಿದ್ದರು. ಅವರಲ್ಲಿ ಒಬ್ಬಾಕೆ ಮೆಲ್ಲಗೆ ಮಾತು ಶುರುಮಾಡಿ, ಆ ಈ ವಿಶಯಗಳನ್ನೆಲ್ಲ ದಾಟಿ ನಂತರ, “ನಿನ್ನೆ ಏನಾಯಿತು ಗೊತ್ತಾ, ನಮ್ಮೆಜಮಾನ್ರು ಆಫೀಸಿಗೆ ಹೋಗ್ತೀನಿ ಅಂತ ಹೋದ್ರು, ಸ್ವಲ್ಪ ಹೊತ್ತಾದ ಮೇಲೆ ನಾನು ಆಫೀಸಿಗೆ ಫೋನ್ ಮಾಡಿದ್ರೆ, ಅವರು ಆಫೀಸಿಗೆ ಹೊಗಿಲ್ಲ ಅಂತ ಗೊತ್ತಾಯಿತು”, ಎಂದಳು.

ಅದಕ್ಕೆ ಇನ್ನೊಬ್ಬ ಹೆಂಗಸು, “ಅಯ್ಯೋ ನನ್ನ ವಿಷಯ ಕೇಳಿ, ನಮ್ಮೆಜಮಾನ್ರು ಸ್ನೇಹಿತನ ಮನೆಗೆ ಹೊಗ್ತೀನಿ ಅಂತ ಹೇಳಿದ್ರು, ಸ್ನೇಹಿತನ ಮನೆಗೆ ಫೋನ್ ಮಾಡಿದ್ರೆ ಅಲ್ಲಿಗೆ ಹೋಗೆ ಇಲ್ಲವಂತೆ”, ಎಂದಳು.

ಇಬ್ಬರ ಮಾತನ್ನು ಕೇಳಿಸಿಕೊಳ್ಳುತಿದ್ದ ಮತ್ತೊಬ್ಬಾಕೆ, ನಿಧಾನವಾಗಿ, “ನಮ್ಮೆಜಮಾನ್ರು ಎಲ್ಲಿರ್ತಾರೆ ಅಂತ ನನಗೆ ಚೆನ್ನಾಗಿ ಗೊತ್ತು”, ಎಂದಳು.

ಇನ್ನಿಬ್ಬರು ಹೆಂಗಸರು ಒಟ್ಟಿಗೆ, “ಸಾಧ್ಯಾನೇ ಇಲ್ಲ ! ನಿಮ್ಮ ಗಂಡ ನಿಮಗೆ ಸುಳ್ಳು ಹೇಳಿ ನಂಬಿಸಿದ್ದಾರೆ, ಅವರ ಮಾತನ್ನ ನಂಬಬೇಡಿ”, ಎಂದು ಕಿರುಚಿದರು.

ಅದಕ್ಕೆ ಇನ್ನೊಬ್ಬಾಕೆ ನಿಧಾನವಾಗಿ, “ಹಾಗೇನಿಲ್ಲ, ನಾನು ವಿಧವೆಯಾಗಿ ಒಂದು ವರುಷವಾಯಿತು” ಎಂದಳು.

ನಿನ್ನ ಹೃದಯ ಹಸಿರಾಗಿರಲೀ… ನವೆಂಬರ್ 21, 2008

Posted by Bala in ಬದುಕು.
6 comments

ಫುಟ್ಟಣ್ಣ ಕಣಗಾಲರ ರಂಗನಾಯಕಿ ಚಿತ್ರದ, “ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕೀ ರಂಗನಾಯಕಿ..”, ಗೀತೆಯಲ್ಲಿ ಬರುವ “ನಿನ್ನ ಹೃದಯ ಹಸಿರಾಗಿರಲೀ ನಿನ್ನ ನೆನಪು ಚಿರವಾಗಿರಲಿ ಹೋಗಿ ಬಾ..” ಎಂಬ ಸಾಲುಗಳು ಮನವನ್ನು ಕಲಕಿಬಿಡುತ್ತವೆ. ಎಸ್ಪಿ ಬಾಲಸುಬ್ರಮಣ್ಯಂ ರವರು ಸೊಗಸಾಗಿ ಹಾಡಿರುವ ಈ ಹಾಡಿನಲ್ಲಿ, ಅವರು “ನಿನ್ನ ಹೃದಯ ಹಸಿರಾಗಿರಲೀ..” ಎಂದು ಧೀರ್ಘವಾಗಿ ಅಲಾಪಿಸಿ ನಂತರ ” ನಿನ್ನ ಹೃದಯ ಹಸಿರಾಗಿರಲೀ… ನಿನ್ನ ನೆನಪು ಚಿರವಾಗಿರಲಿ” ಹೇಳಿ, “ಹೋಗಿ ಬಾ..” ಎಂಬಲ್ಲಿ ಹೆಣ್ಣು ದನಿಯೊಂದರ ಅಲಾಪದೊಂದಿಗೆ ಮತ್ತೆ “ಹೋಗಿ ಬಾ.. ಧೀರ್ಘ ಸುಮಂಗಲಿ.. ಧೀರ್ಘ ಸುಮಂಗಲಿ..”ಎಂಬಲ್ಲಿಗೆ ಹಾಡು ಕೊನೆಯಾಗುತ್ತದೆ, ನಮ್ಮ ಕಣ್ಣು ಒದ್ದೆಯಾಗಿರುತ್ತದೆ.

ರಾಮಣ್ಣ (ಅಂಬರೀಶ್) ಚಿಕ್ಕವನಾಗಿದ್ದಾಗ ರಂಗನಾಯಕಿ (ಆರತಿ) ಯನ್ನು ಮದುವೆಯಾಗಬೇಕೆಂಬ ಆಸೆಯಿರುತ್ತದೆ, ಆದರೆ ರಂಗನಾಯಕಿ ರಾಮಣ್ಣನನ್ನು ತನ್ನ ಅಣ್ಣನಂತೆ ಸ್ವೀಕರಿಸಿದಾಗ, ರಾಮಣ್ಣ ರಂಗನಾಯಕಿಯನ್ನು ತಂಗಿಯಂತೆ ಸ್ವೀಕರಿಸುತ್ತಾನೆ. ಕೊನೆಯವರೆಗೂ ರಾಮಣ್ಣ ಮದುವೆ ಆಗದೆ ಉಳಿಯುತ್ತಾನೆ. ಇಂತಹ ಅಣ್ಣನೊಬ್ಬ ಮದುವೆಯಾದ ತನ್ನ ತಂಗಿಯನ್ನು ತವರು ಮನೆಯಿಂದ ಗಂಡನ ಮನೆಗೆ ಬೀಳ್ಕೊಡುವಾಗ ಹಾಡುವ ಈ ಹಾಡು, ಆ ಸನ್ನಿವೇಶದ ಘಾಡತೆಯನ್ನು ಬಹಳ ಸುಂದರವಾಗಿ ಪರಿಚಯಿಸುತ್ತದೆ.

ನಮ್ಮ ಪ್ರೀತಿಯ ವಸ್ತುವೊಂದು ನಮ್ಮನ್ನು ಅಗಲಿ ದೂರವಾಗುವಾಗ ಅನುಭವಿಸುವ ವಿರಹ ಈ ಸಾಲುಗಳಲ್ಲಿ ಕೆನೆಗಟ್ಟಿದೆ ಎಂದೆನಿಸುತ್ತದೆ. ನಮ್ಮ ಪ್ರೀತಿಪಾತ್ರವಾದವರು ನಮ್ಮಿಂದ ದೂರವಾದರೆ, ಆ ಕ್ಷಣದಲ್ಲಿ ನಮಗೆ ನಮ್ಮ ಸುತ್ತಲಿನ ನೆಲ ಕುಸಿದಂತೆ, ಗೊಂಡಾರಣ್ಯದಲ್ಲಿ ನಾವೊಬ್ಬರೇ ಇದ್ದಂತೆ ಅನಿಸಿ, ಅವ್ಯಕ್ತ ಭಯ ನಮ್ಮನ್ನು ಆವರಿಸುತ್ತದೆ. ಯಾವುದೇ ಸುಖವನ್ನು ಅನುಭವಿಸಿದ ಮನಸ್ಸು ಅದನ್ನು ಮತ್ತೆ ಮತ್ತೆ ಬಯಸುತ್ತದೆ. ಅದನ್ನು ಕಳೆದುಕೊಳ್ಳುವಾಗ, ಮನಸ್ಸಿಗೆ ದುಃಖವಾಗುತ್ತದೆ.

***************

ಗಾಯನ  : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್.ಪಿ.ಶೈಲಜ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ

ಕನ್ನಡ ನಾಡಿನ ರಸಿಕರ ಮನವ
ಸೂರೆಗೊಂಡ ನಾಯಕಿ ರಂಗನಾಯಕಿ ರಂಗನಾಯಕಿ

ಕಲೆಯ ರಸಗಂಗೆಯಲ್ಲಿ ಮಿಂದ ಸೌಂದರ್ಯದಲ್ಲಿ
ಮಾತಂಗಿ ತಂಗಿ ಲಲಿತ ಲತಾಂಗಿ..
ತಂಗೀ ಲಲಿತ ಲತಾಂಗಿ..

ಬಣ್ಣದ ಬದುಕಿಂದ..
ಬಣ್ಣದ ಬದುಕಿಂದ ಚಿನ್ನದ ಬಾಳಿಗೆ
ಮನ್ನಣೆ ಪಡೆದ ಭಾಗ್ಯವತಿ ಸೌಭಾಗ್ಯವತಿ

ನಿನ್ನ ಹೃದಯ ಹಸಿರಾಗಿರಿಲೀ……
ನಿನ್ನ ನೆನಪು ಸವಿಯಾಗಿರಲಿ
ಹೋಗಿ ಬಾ.. ಹೋಗಿ ಬಾ.. ಹೋಗಿ ಬಾ..
ಧೀರ್ಘ ಸುಮಂಗಲಿ ಧೀರ್ಘ ಸುಮಂಗಲಿ

ನೀರ ಮೇಲಿನ ಗುಳ್ಳೆ ನವೆಂಬರ್ 5, 2008

Posted by Bala in ಬದುಕು.
Tags:
6 comments

ಮಹಾನದಿಯ ಒಂದು ತಿರುವಿನಲ್ಲಿ ಸಾವಿರಾರು ಗುಳ್ಳೆಗಳು ತೇಲಿ ಹೋಗುತಿದ್ದವು. ಅವುಗಳನ್ನು ನೋಡಿದ ನಾನು ‘ನೀನು ಯಾರು’ ಎಂದು ಕಿರುಚಿದೆ, ಆಗೊಂದು ಗುಳ್ಳೆ ನನ್ನ ಕಡೆ ಆಶ್ಚರ್ಯದಿಂದ ನೋಡಿ, ಹೀಯಾಳಿಸುವ ದನಿಯಲ್ಲಿ ಹೇಳಿತು ‘ಅಯ್ಯೋ ಅಷ್ಟು ತಿಳಿಯುವುದಿಲ್ಲವೇ, ನಾನೊಂದು ನೀರ ಮೇಲಿನ ಗುಳ್ಳೆ’ ಎಂದಿತು. ಆದರೆ ಒಂಟಿಯಾಗಿ ಹೋಗುತಿದ್ದ ಗುಳ್ಳೆಯೊಂದು, ನನ್ನ ಕಡೆ ತಿರುಗಿ, ಯಾವುದೇ ಭಾವೋದ್ವೇಗವಿಲ್ಲದ ಆದರೆ ಗಂಭೀರ ಹಾಗು ಖಚಿತವಾದ ದನಿಯಲ್ಲಿ ಹೇಳಿತು ‘ನಾವು ಈ ಮಹಾನದಿ’.

Taken from “Ask the Awakened” by Wei Wu Wei…