ಎಲ್ಲಿಯೂ ನಿಲ್ಲದಿರು.. ಜೂನ್ 17, 2008
Posted by Bala in ಬದುಕು.Tags: ಓ ನನ್ನ ಚೇತನ
trackback
ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ ನನ್ನ ಚೇತನ ಆಗು ನೀ ಅನಿಕೇತನ
ಕುವೆಂಪುರವರ ವಿಶ್ವಮಾನವ ಸಂದೇಶವನ್ನು ಸಾರುವ “ಅನಿಕೇತನ”, ಕವನದ ಮೇಲಿನ ಸಾಲುಗಳು ತೆರೆದ ಮನಸ್ಸಿನ ಬಗ್ಗೆ ಒಂದು ಸುಂದರ ವ್ಯಾಖ್ಯಾನವನ್ನು ಮಾಡಿದೆ. ಯಾವುದೇ ವಿಚಾರ ನಮಗೆ ಸರಿಯೆನಿಸಿ ಅರ್ಥವಾದಮೇಲೆ, ನಾವು ಅದಕ್ಕೆ ಕಟ್ಟುಬಿದ್ದು, ಅದೇ ಸರಿ ಮತ್ತೇಲ್ಲಾ ತಪ್ಪು ಎಂಬ ಕುರುಡು ನಂಬಿಕೆ ಬೆಳೆಸಿಕೊಳ್ಲುತ್ತೇವೆ. ನಮಗೆ ತಿಳಿದ ವಿಚಾರದ ವಿರುದ್ದ ಮಾತಾಡುವುದನ್ನು ನಾವು ಸಹಿಸುವುದಿಲ್ಲ, ಶತಾಯ ಗತಾಯ ನಮಗೆ ತಿಳಿದಿರುವುದನ್ನೆಲ್ಲಾ ಹೇಳಿ, ನಮ್ಮ ವಿಚಾರವೆ ಸರಿ ಎಂದು ವಾದಿಸುತ್ತೇವೆ. ತೆರೆದ ಮನಸ್ಸು ಇದಕ್ಕೆ ವಿರುದ್ದವಾದುದು, ಯಾವುದೇ ವಿಚಾರವು ನಮಗೆ ಅರ್ಥವಾಗಿ ಮತ್ತು ಅದು ಸರಿ ಎನಿಸಿದರೂ, ಇದಮ್ಮಿತ್ತಂ ಎಂದು ಆ ವಿಚಾರಗಳಿಗೆ ಜೋತು ಬೀಳದೇ ಇರುವುದು, ಎಲ್ಲ ವಿಚಾರಗಳಿಗೂ ಮನಸ್ಸನ್ನು ತೆರೆದಿಡುವುದೇ.. ಎಲ್ಲಿಯೂ ನಿಲ್ಲದಿರು..
ನಮ್ಮ ಮನಸ್ಸಿನಲ್ಲಿ ವಿಚಾರಗಳ ಮನೆಯೊಂದನ್ನು ಕಟ್ಟಿ ಬಾಗಿಲನ್ನು ಭದ್ರವಾಗಿ ಹಾಕಿಕೊಂಡು, “ನನಗೆ ತುತ್ತೂರಿ ಇದೆಯೆಂದು ಬೇರಾರಿಗು ಅದು ಇಲ್ಲೆಂದು” ಬದುಕಿದರೆ ಅತಿ ಶೀಘ್ರದಲ್ಲೇ ಉಸಿರುಕಟ್ಟಿದ ವಾತಾವರಣ ಉಂಟಾಗಿ ಆ ವಿಚಾರಗಳ ಮನೆಯಿಂದ ಹೊರಗೆ ಓಡಿ ಹೊಗಬೇಕೆನಿಸುತ್ತದೆ. ಕಾಡು, ಬೆಟ್ಟ , ಸೂರ್ಯ, ಚಂದ್ರ ಇವರೊಡನೆ ಬಟ್ಟ ಬಯಲಿನಲ್ಲಿ ಬದುಕಬೇಕೆನಿಸುತ್ತದೆ. ಮನೆಯನೆಂದು ಕಟ್ಟದಿರು..
ನಾವು ಸಾಯುವ ಹಿಂದಿನ ಕ್ಷಣದಲ್ಲೂ ತಿಳಿಯಬೇಕಾಗಿರುವುದು ಇರುತ್ತದೆ, ವಿಚಾರಗಳನ್ನು ಅರಿಯುವುದರಲ್ಲಿ ಎಂದೂ ಕೊನೆಯೆಂಬುದೇ ಇಲ್ಲ, ಸದಾ ಬೆಳೆಯುತ್ತಲೇ ಹೋಗಬಹುದು, ಎಲ್ಲವನ್ನೂ ತಿಳಿದೂ ಯಾವುದಕ್ಕೂ ಅಂಟಿಕೊಳ್ಳದೆ ಸದಾ ತೆರೆದೆ ಮನಸ್ಸಿನಿಂದ , ಇದು ಒಳ್ಳೆಯದು, ಇದು ಕೆಟ್ಟದ್ದು, ಇದು ಬೇಕು ,ಇದು ಬೇಡ ಇವೆಲ್ಲವನ್ನು ಮೀರಿ ಸದಾ ಮಗುವಿನ ಕುತೂಹಲದಿಂದ ಎಲ್ಲವನ್ನೂ ನೋಡುವ, ಬೆಳೆಯುವ ಗುಣದೊಡನೆ ಕೊನೆಯನೆಂದು ಮುಟ್ಟದಿರು..
ಓ ನನ್ನ ಚೇತನ ಆಗು ನೀ ಅನಿಕೇತನ
very good
Vishalamathi,
Thanks for your comments.