jump to navigation

ಹುಡುಕಾಟ ಜೂನ್ 20, 2008

Posted by Bala in ಕವನ - ಚುಟುಕ, ಬದುಕು.
Tags:
add a comment

We shall not cease from exploration
And the end of all our exploring
Will be to arrive where we started
And know the place for the first time.

– T.S. Eliot

ನಿರಂತರವಾದ ಸತ್ಯದ ಹುಡುಕಾಟದ ಕೊನೆ
ನಾವು ಶುರುಮಾಡಿದ ಜಾಗಕ್ಕೆ ಬಂದು
ಅದನ್ನು ಮೊಟ್ಟಮೊದಲಬಾರಿಗೆ
ಸಂಪೂರ್ಣವಾಗಿ ಅರಿಯುವುದರಲ್ಲಿದೆ

ಎಲ್ಲಿಯೂ ನಿಲ್ಲದಿರು.. ಜೂನ್ 17, 2008

Posted by Bala in ಬದುಕು.
Tags:
2 comments

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ ನನ್ನ ಚೇತನ ಆಗು ನೀ ಅನಿಕೇತನ

ಕುವೆಂಪುರವರ ವಿಶ್ವಮಾನವ ಸಂದೇಶವನ್ನು ಸಾರುವ “ಅನಿಕೇತನ”, ಕವನದ ಮೇಲಿನ ಸಾಲುಗಳು ತೆರೆದ ಮನಸ್ಸಿನ ಬಗ್ಗೆ ಒಂದು ಸುಂದರ ವ್ಯಾಖ್ಯಾನವನ್ನು ಮಾಡಿದೆ. ಯಾವುದೇ ವಿಚಾರ ನಮಗೆ ಸರಿಯೆನಿಸಿ ಅರ್ಥವಾದಮೇಲೆ, ನಾವು ಅದಕ್ಕೆ ಕಟ್ಟುಬಿದ್ದು, ಅದೇ ಸರಿ ಮತ್ತೇಲ್ಲಾ ತಪ್ಪು ಎಂಬ ಕುರುಡು ನಂಬಿಕೆ ಬೆಳೆಸಿಕೊಳ್ಲುತ್ತೇವೆ. ನಮಗೆ ತಿಳಿದ ವಿಚಾರದ ವಿರುದ್ದ ಮಾತಾಡುವುದನ್ನು ನಾವು ಸಹಿಸುವುದಿಲ್ಲ, ಶತಾಯ ಗತಾಯ ನಮಗೆ ತಿಳಿದಿರುವುದನ್ನೆಲ್ಲಾ ಹೇಳಿ, ನಮ್ಮ ವಿಚಾರವೆ ಸರಿ ಎಂದು ವಾದಿಸುತ್ತೇವೆ. ತೆರೆದ ಮನಸ್ಸು ಇದಕ್ಕೆ ವಿರುದ್ದವಾದುದು, ಯಾವುದೇ ವಿಚಾರವು ನಮಗೆ ಅರ್ಥವಾಗಿ ಮತ್ತು ಅದು ಸರಿ ಎನಿಸಿದರೂ, ಇದಮ್ಮಿತ್ತಂ ಎಂದು ಆ ವಿಚಾರಗಳಿಗೆ ಜೋತು ಬೀಳದೇ ಇರುವುದು, ಎಲ್ಲ ವಿಚಾರಗಳಿಗೂ ಮನಸ್ಸನ್ನು ತೆರೆದಿಡುವುದೇ.. ಎಲ್ಲಿಯೂ ನಿಲ್ಲದಿರು..

ನಮ್ಮ ಮನಸ್ಸಿನಲ್ಲಿ ವಿಚಾರಗಳ ಮನೆಯೊಂದನ್ನು ಕಟ್ಟಿ ಬಾಗಿಲನ್ನು ಭದ್ರವಾಗಿ ಹಾಕಿಕೊಂಡು, “ನನಗೆ ತುತ್ತೂರಿ ಇದೆಯೆಂದು ಬೇರಾರಿಗು ಅದು ಇಲ್ಲೆಂದು” ಬದುಕಿದರೆ ಅತಿ ಶೀಘ್ರದಲ್ಲೇ ಉಸಿರುಕಟ್ಟಿದ ವಾತಾವರಣ ಉಂಟಾಗಿ ಆ ವಿಚಾರಗಳ ಮನೆಯಿಂದ ಹೊರಗೆ ಓಡಿ ಹೊಗಬೇಕೆನಿಸುತ್ತದೆ. ಕಾಡು, ಬೆಟ್ಟ , ಸೂರ್ಯ, ಚಂದ್ರ ಇವರೊಡನೆ ಬಟ್ಟ ಬಯಲಿನಲ್ಲಿ ಬದುಕಬೇಕೆನಿಸುತ್ತದೆ. ಮನೆಯನೆಂದು ಕಟ್ಟದಿರು..

ನಾವು ಸಾಯುವ ಹಿಂದಿನ ಕ್ಷಣದಲ್ಲೂ ತಿಳಿಯಬೇಕಾಗಿರುವುದು ಇರುತ್ತದೆ, ವಿಚಾರಗಳನ್ನು ಅರಿಯುವುದರಲ್ಲಿ ಎಂದೂ ಕೊನೆಯೆಂಬುದೇ ಇಲ್ಲ, ಸದಾ ಬೆಳೆಯುತ್ತಲೇ ಹೋಗಬಹುದು, ಎಲ್ಲವನ್ನೂ ತಿಳಿದೂ ಯಾವುದಕ್ಕೂ ಅಂಟಿಕೊಳ್ಳದೆ ಸದಾ ತೆರೆದೆ ಮನಸ್ಸಿನಿಂದ , ಇದು ಒಳ್ಳೆಯದು, ಇದು ಕೆಟ್ಟದ್ದು, ಇದು ಬೇಕು ,ಇದು ಬೇಡ ಇವೆಲ್ಲವನ್ನು ಮೀರಿ ಸದಾ ಮಗುವಿನ ಕುತೂಹಲದಿಂದ ಎಲ್ಲವನ್ನೂ ನೋಡುವ, ಬೆಳೆಯುವ ಗುಣದೊಡನೆ ಕೊನೆಯನೆಂದು ಮುಟ್ಟದಿರು..

ಓ ನನ್ನ ಚೇತನ ಆಗು ನೀ ಅನಿಕೇತನ

ಝೆನ್ ಗಾದೆ ಜೂನ್ 16, 2008

Posted by Bala in ಬುದ್ಧ ಮತ್ತು ಝೆನ್.
Tags:
4 comments

If you understand, things are just as they are;
If you do not understand, things are just as they are.

– Zen proverb

ನಮಗೆ ಅರ್ಥವಾದರೂ, ಜಗತ್ತು ಹೇಗಿತ್ತೋ ಹಾಗೆ ಇದೆ
ನಮಗೆ ಅರ್ಥವಾಗದಿದ್ದರೂ, ಜಗತ್ತು ಹೇಗಿತ್ತೋ ಹಾಗೆ ಇದೆ

ನಾವು ಏನೆಲ್ಲಾ ತಲೆ ಕೆಳಗಾಗಿ ನಿಂತು, ಇರುವ ಬುದ್ದಿಯನ್ನೇಲ್ಲಾ ಉಪಯೋಗಿಸಿ ಈ ಜಗತ್ತನ್ನು ಅರ್ಥಮಾಡಿಕೊಂಡರು, ಇಲ್ಲಾ ಇದೆಲ್ಲಾ ನಮ್ಮ ತಲೆಗೆ ಹತ್ತಲ್ಲ ಎಂದುಕೊಂಡರೂ ಇರುವ ವಸ್ತು ಅಥವಾ ಜಗತ್ತು ಬದಲಾಗುವುದಿಲ್ಲ. ಅದು ಹಾಗೇ ಇದೆ, ಮುಂದೇ ಕೂಡಾ ಇರುತ್ತೇ. ಅರಿವಿನ ಒಂದು ಸ್ತರದಲ್ಲಿ ನನಗೆಲ್ಲಾ ಗೊತ್ತು ಎಂದರೂ ಒಂದೇ, ನನಗೇನೂ ಗೊತ್ತಿಲ್ಲಾ ಅಂದರೂ ಒಂದೇ. 

ನಕ್ಕಮೇಲೆ ಅಳಬೇಕೇ? ಜೂನ್ 13, 2008

Posted by Bala in ಹಾಸ್ಯ, ಹರಟೆ.
Tags: ,
add a comment

ನಗೆನಗಾರಿಡಾಟ್‍ಕಾಮ್ ನಲ್ಲಿ ’ಬುದ್ದ ನಗಲಿಲ್ಲ’ ಎಂಬ ಚರ್ಚೆಯ ಪ್ರಶ್ನೆಯೆಂದರೆ

ಕಣ್ಣಲ್ಲಿ ನೀರು ಊಟೆ ಒಡೆಯುವ ಹಾಗೆ ನಕ್ಕಾಗ ನಮ್ಮೊಳಗಿನೆ ಗಂಟುಗಳೆಲ್ಲಾ ಸಡಿಲಾಗಿ ನಾವು ತೀರಾ ಸಹಜವಾಗಿಬಿಡುತ್ತೇವೆ, ನಮ್ಮ ಕೃತಕತೆಯನ್ನು ಕಿತ್ತೊಗೆದು ನಮ್ಮ ಕೇಂದ್ರಕ್ಕೆ ನಾವು ಹತ್ತಿರಾಗಿಬಿಡುತ್ತೇವೆ. ಆದರೆ ಮರುಕ್ಷಣವೇ ನಮ್ಮ ಪ್ರಜ್ಞೆ ನಮ್ಮನ್ನು ಚುಚ್ಚಲು ಶುರು ಮಾಡುತ್ತದೆ. ಇಷ್ಟು ನಕ್ಕು ಬಿಟ್ಟಿದ್ದೀಯ, ಮುಂದೆ ಇನ್ನೇನು ಕಾದಿದೆಯೋ ಎಂದು ಹೆದರಿಸುತ್ತದೆ. ಮನಸಾರೆ ನಕ್ಕ ಬಗ್ಗೆ ಒಂದು ಗಿಲ್ಟ್ ಹುಟ್ಟಿಕೊಳ್ಳುತ್ತದೆ.

ಯಾಕೆ ಹೀಗೆ?

ಇದರ ಬಗ್ಗೆ ನನ್ನ ಅನಿಸಿಕೆ:

ನಮ್ಮಲ್ಲಿ ಒಂದು ನಂಬಿಕೆಯಿದೆ, ಅದೆಂದರೆ ತುಂಬಾ ನಕ್ಕಮೇಲೆ ಅಳಬೇಕಾಗುತ್ತೇ, ಹಾಗೂ ತುಂಬಾ ಅತ್ತಮೇಲೆ ನಗಬೇಕಾಗುತ್ತದೆ, ಇದನ್ನೆ ಇನ್ನೊಂದು ರೀತಿ ಹೇಳಬೇಕೆಂದರೆ, ಸುಖ ದುಃಖ ಎರಡೂ ಒಂದಾದ ಮೇಲೆ ಒಂದು ಬರುತ್ತವೆ ಎಂಬುದು ನಮ್ಮ ನಂಬಿಕೆ. ಈ ನಂಬಿಕೆ ನಮ್ಮೆಲ್ಲರಲ್ಲೂ ಸಾಮಾನ್ಯವಾಗಿ ಆಳವಾಗಿ ಬೇರೂರಿದೆ. ಹಾಗಲ್ಲದೇ ಈ ವಿಚಾರ ಎಷ್ಟೊ ಸರ್ತಿ ನಮ್ಮ ಬದುಕಿನಲ್ಲಿ ನಿಜವಾಗಿರುವುದನ್ನೂ ಕಂಡಿರುತ್ತೇವೆ. ಕೆಲವೊಮ್ಮೆ ತುಂಬಾನಕ್ಕಮೇಲೆ, ಕೆಟ್ಟ ಸುದ್ದಿಯನ್ನ ಕೇಳಿರುವುದೊ ಅಥವಾ ತುಂಬಾ ನಕ್ಕು ನಕ್ಕು ಆಧಾರ ತಪ್ಪಿ ಬಿದ್ದು ಹಲ್ಲು ಮುರಿದು ಕೊಂಡಿರುವುದೋ ಇತ್ಯಾದಿ ಯಾಗಿ ನಡೆದಿರುವುದನ್ನು ಗಮನಿಸಿದ ನಮ್ಮ ಮನಸ್ಸು ಈ ವಿಷಯವನ್ನು ಅಂದರೆ, ತುಂಬಾ ನಕ್ಕಾಗ ಏನಾದರೂ ಅನಾಹುತ ಆಗುತ್ತೇ ಎನ್ನುವ ನಂಬಿಕೆಯನ್ನು ತನ್ನ ಹಾರ್ಡ್ ಡಿಸ್ಕನಲ್ಲಿ ಭದ್ರವಾಗಿ ಇಟ್ಟಿರುತ್ತದೆ. ನಾವು ಯಾವಾಗ ಜಾಸ್ತಿ ನಗಲು ಆರಂಭಿಸುತ್ತೇವೊ ಆಗ ನಮ್ಮ ಮನಸ್ಸು ತನ್ನ ಹಾರ್ಡಡಿಸ್ಕನ್ನು  ಸ್ಕ್ಯಾನ್ ಮಾಡಿ, ಇದೇ ರೀತಿಯ ಸನ್ನಿವೇಶಗಳನ್ನು ಹುಡುಕಿ ನೊಡಿ, ಅವುಗಳ ಪಲಿತಾಂಶಗಳನ್ನು ಗಮನಿಸಿ ನಮ್ಮನ್ನು ಎಚ್ಚರಿಸುತ್ತದೆ, ಜಾಸ್ತಿ ನಗಬೇಡವೋ ಮುಠ್ಠಾಳ, ನೀನು ಇಷ್ಟೊಂದು ನಕ್ಕರೆ ನಂತರ ಅಳಬೇಕಾತ್ತೇ ಅಂತ. ಆಗ ನಮಗೆ ಗಿಲ್ಟಿ ಶುರುವಾಗಿ ನಗುವುದನ್ನು ನಿಲ್ಲಿಸುತ್ತೇವೆ.

ಇದನ್ನು ಸರಿಪಡಿಸಬಹುದಾದ ದಾರಿ ಒಂದೇ, ಅದೆಂದರೆ ನಮ್ಮ ನಂಬಿಕೆಯನ್ನ ಮುರಿಯಬೇಕು. ನಂಬಿಕೆ ಒಂದು ನಂಬಿಕೆ ಅಷ್ಟೇ, ಅದು ನಮ್ಮ ಬದುಕನ್ನು ಸಂಕುಚಿತಗೊಳಿಸಬಾರದು. ಆದದ್ದು ಆಗಲಿ, ನಾನು ನನ್ನಿಷ್ಟ ಬಂದಷ್ಟು ನಕ್ಕೇ ನಗುತ್ತೇನೆ ಎಂಬ ದೃಢ ನಿರ್ದಾರ ಮಾಡಿದ್ದಾದಲ್ಲಿ, ನಾವು ನಮ್ಮಿಷ್ಟ ಬಂದಷ್ಟು ನಗಬಹುದು, ಯಾವುದೇ ಚಿಂತೆ ಯಿಲ್ಲದೆ. ಅಕಸ್ಮಾತ್ತಾಗಿ ತುಂಬಾ ನಕ್ಕ ಮೇಲೆ ಯಾವುದೊ ದುಃಖದ ಸಂಗತಿ ನಡೆಯಿತೆಂದು ಇಟ್ಟು ಕೊಂಡರು, ದುಃಖದ ಸಂಗತಿ ನಡೆದಿದ್ದಕ್ಕೂ ನಾವು ತುಂಬಾ ನಕ್ಕಿದ್ದಕ್ಕೂ ಯಾವುದೇ ಸಂಬಂಧವಿಲ್ಲಾ ಎಂದುಕೊಂಡರೆ ಸಾಕು, ನಮ್ಮ ನಂಬಿಕೆ ತಾನಾಗೇ ಬದಲಾಗುತ್ತೇ. ಅಗ ನಮ್ಮ ಮನಸ್ಸು ತಮ್ಮ ಹಾರ್ಡ್‌ಡಿಸ್ಕ್ ನಲ್ಲಿದ್ದ ಹಳೆಯ ವಿಶಯವನ್ನು ಅಳಿಸಿ, ಹೊಸ ವಿಶಯವನ್ನು ಬರೆದುಕೊಳ್ಳುತ್ತದೆ. ಅಲ್ಲಿಂದ ಮುಂದೆ ನೀವು ತುಂಬಾ ನಕ್ಕರೂ ನಿಮಗೆ ಗಿಲ್ಟ್ ಕಾಡುವುದಿಲ್ಲ.

ಡಿವಿಜಿಯವರು ಹೇಳಿರುವಂತೆ ನಗುವು ಸಹಜದ ಧರ್ಮ.. ನಕ್ಕಮೇಲೆ ಅಳಬೇಕಾಗಿಲ್ಲ, ಯಾವಾಗಲೂ ನಗುತ್ತಿರುವುದು ಸಾಧ್ಯ. ಹಾಗೆಂದ ಮಾತ್ರಕ್ಕೇ ಯಾವಾಗಲೂ ಕೇಕೇ ಹಾಕಿ ನಗುತ್ತಿರಬಹುದು ಎಂದಲ್ಲ, ಬುದ್ದನ ಮಂದಹಾಸ ದಂತೆ ನಗು ನಮ್ಮ ಮುಖದ ಮೇಲೆ ಲಾಸ್ಯವಾಡುತ್ತಿದ್ದರೆ ನೋಡಲು ಎಷ್ಟು ಚೆನ್ನ.