ಪೂರ್ಣವ ಕೊಡದೆ ಪೂರ್ಣವ ಪಡೆವುದೆಂತು?

ನಾನು ಈ ಇಳಿವಯಸ್ಸಿನಲ್ಲಿ ಮನೆಯಲ್ಲಿ ಕಾಲ ಕಳೆಯುವುದಕ್ಕಿನ್ನ ಮನೆಯ ಪಕ್ಕದಲ್ಲಿದ್ದ ಪಾರ್ಕಿನಲ್ಲಿ ಹೆಚ್ಚು ಕಾಲ ಕಳೆಯುತಿದ್ದೇನೆ ಅನಿಸುತಿದ್ದೆ, ಹಾಗೆ ನೋಡಿದರೆ ತೀರಾ ಇತ್ತೀಚಿನವರೆಗೂ ನನ್ನ ಜೀವಮಾನವೆಲ್ಲ ಮನೆಯ ಹೊರಗೇ ಕಳೆದಿದ್ದೇನೆ. ಮಕ್ಕಳು ಪ್ರಿಂಟಿಗ್ ಪ್ರೆಸ್ ನೊಡಿಕೊಳ್ಳಲು ಶುರು ಮಾಡಿದ ಮೇಲೆ, ಮೈಯಲ್ಲಿ ಎಂದಿನಂತೆ ಆರೊಗ್ಯವಿಲ್ಲದೆ ಮೂರು ಹೊತ್ತು ಮನೆಯಲ್ಲಿರಬೆಕಾಗಿದೆ. ಆದರೆ ಉಸಿರುಗಟ್ಟುವ ಮನೆಯ ವಾತಾವರಣ, ಅಥವಾ ಎಂದೂ ಮನೆಯಲ್ಲಿ ಇರದ ಕಾರಣವೊ ಎನೊ, ನಾನು ಹೆಚ್ಚು ಹೊತ್ತು ಪಾರ್ಕಿನಲ್ಲಿ ಕಳೆಯುವಂತಾಗಿದೆ. ಮನೆಯಲ್ಲಿ ಹೆಂಡತಿ ಮಕ್ಕಳಿಗೆ, ನನ್ನ ಬಗ್ಗೆ ಅಸಡ್ಡೆ, ಹಾಗೆಂದು ನನ್ನ ಬೇಕು ಬೇಡಗಳಾವುದನ್ನೂ ನನ್ನ ಮನೆಯವರು ನಿರಾಕರಿಸಿಲ್ಲ, ಆದರೆ ನನ್ನೊಡನೆ ಯಾರಿಗೂ ಆತ್ಮೀಯತೆಯಿಲ್ಲ. ಪದ್ಮ ನನ್ನೊಡನೆ ಮಾತಾಡುವುದನ್ನು ನಿಲ್ಲಿಸಿ ವರ್ಷಗಟ್ಟಲೆ ಯಾಗಿದೆ. ವಿಜಯ ವಿಕ್ರಮರು ನನ್ನೊಡನೆ ವ್ಯವಹಾರಕ್ಕೆ ಎಷ್ಟು ಬೇಕೊ ಆಷ್ಟು ಮಾತು. ಈ ಇಳಿವಯಸ್ಸಿನಲ್ಲಿ ಎಲ್ಲಾ ಇದ್ದೂ ಎನೂ ಇಲ್ಲದವನಂತಿದ್ದೇನೆ.

ಬೆಳಿಗ್ಗೆ ಮನೆಯಿಂದ ಹೊರಟು ಪಾರ್ಕಿನ ಕಡೆ ನಡೆಯುತಿದ್ದಾಗ, ಏನು ಶ್ಯಾಮಣ್ಣೋರು ಗಾಳಿಸೇವನೆಗೆ ಹೊರಟಹಾಗಿದೆ, ಪರಿಚಯದವರು ದಾರಿಯಲ್ಲಿ ಕೇಳಿದರು, ಎದುರುತ್ತರವಾಗಿ, ಸಣ್ಣಗೆ ನಕ್ಕು ಮುಂದುವರೆದೆ. ಸುಬ್ಬು, ನನ್ನ ಬಾಲ್ಯ ಸ್ನೇಹಿತ ದಾರಿಯಲ್ಲಿ ನನ್ನನ್ನು ಕೂಡಿಕೊಂಡ, ಪಾರ್ಕಿನ ಕಡೆ ಹೆಜ್ಜೆ ಹಾಕುತಿದ್ದೆವು. “ಸುಬ್ಬು, ನಾನು ಈಗಿರುವ ಸ್ಥಿತಿಗೆ ನಾನೆ ಕಾರಣ, ಏನಂತೀಯಾ”, ಈ ಪ್ರಶ್ನೆಯನ್ನು ಹಲವಾರು ಬಾರಿ ಕೇಳಿದ್ದೆ, ನನ್ನನು ಚೆನ್ನಾಗಿ ಬಲ್ಲ ಸುಬ್ಬು ಎಂದಿನಂತೆ ಮೌನವಾಗಿ ನಡೆಯತೊಡಗಿದ. ನನ್ನಲ್ಲಿದ್ದ ಅಳುಕು ನನ್ನನ್ನು ಕಾಡತೊಡಗಿತು. ನಾನು ಸುಬ್ಬು ಮೌನವಾಗಿಯೆ, ಪಾರ್ಕಿನಲ್ಲಿ ಎರಡು ಸುತ್ತು ನಡೆದು, ಸ್ವಲ್ಪ ಹೊತ್ತು ಬೆಂಚಿನ ಮೇಲೆ ಕುಳಿತಿದ್ದೆವು. ಸುಬ್ಬು ಮೌನವಾಗಿದ್ದರೂ, ಅವನ ಮನಸ್ಸು ಹೇಳುತಿದ್ದುದು ನನಗೆ ಕೇಳಿಸುತ್ತಿದೆ. ಸುಬ್ಬು ನಾನು ವಾರಕ್ಕೊಮ್ಮೆಯದರೂ ಬಾರಿನಲ್ಲಿ ಕುಳಿತು ಹರಟೇ ಹೊಡೆಯುತಿದ್ದು ಬಾಲ್ಯದಿಂದಲೂ ನಡೆದು ಬಂದಿದ್ದು. ನನ್ನ ಸ್ವಭಾವ ವನ್ನು ಚೆನ್ನಾಗಿ ಅರಿತಿದ್ದ ಸುಬ್ಬು ಯಾವಗಲೂ ಹೇಳುತ್ತಿದ್ದ, ಮನೆಯಕಡೆ ಗಮನಕೊಡೊ, ಪದ್ಮಳಿಗೆ ತಕ್ಕ ಗಂಡನಾಗು, ನಿನ್ನ ಮಕ್ಕಳಿಗೆ ತಂದೆಯತನವನ್ನು ತೋರಿಸಿಕೊಡೊ. ನನಗೆ ಅವನು ಹೇಳುತ್ತಿದ್ದುದರ ಅರ್ಥ, ಆಗ ಆಗಿರಲಿಲ್ಲ, ಈಗ ಅನುಭವಿಸುತಿದ್ದೇನೆ. ಸ್ವಲ್ಪ ಹೊತ್ತಿನ ನಂತರ ಇಬ್ಬರೂ ಮನೆಯಕಡೆ ನಡೆದೆವು, ಮಾರ್ಗದಲ್ಲಿ, ಸುಬ್ಬು ಎಂದಿನಂತೆ ತನ್ನ ಮನೆಯ ಕಡೆ ತಿರುಗಿದ. ನಾನು ಮನೆಗೆ ಬಂದೆ, ಪದ್ಮ ಆಡುಗೆ ಮನೆಯಲ್ಲಿ ಆಡುಗೇ ಮಾಡುತಿದ್ದದ್ದು ಕಾಣಿಸಿತು. ನನ್ನ ರೂಮಿಗೆ ಬಂದು, ಶರಟನ್ನು ಬಿಚ್ಚಾಕಿ, ದೊಡ್ಡ ಆಕಳಿಕೆ ಬಂದು ಮಂಪರು ಕವಿದಂತಾಗಿ ಹಾಗೆ ಮಂಚದ ಮೇಲೆ ಒರಗಿಕೊಂಡೆ.

ನಾನು ಒಬ್ಬನೇ ಮಗನಾದದ್ದರಿಂದ, ಯಾವುದಕ್ಕೂ ಕೊರತೆಯಿಲ್ಲದೆ ಬಹಳ ಮುದ್ದಿನಿಂದ ಸಾಕಿದ್ದರು. ಕಾಲೇಜಿಗೆ ಸೇರಿದಾಗ, ಅಮ್ಮ ನಾನು ಕೇಳಿದ ಬೈಕ್ ಕೊಡಿಸಿದ್ದರು. ಯಾರವಳು ನನ್ನ ಮೊದಲನೇ ಗೆಳತಿ, ನಳಿನಿಯಿರಬೇಕು, ನನ್ನನ್ನ ಮೇಲೆ ಬಿದ್ದು ಮಾತಾಡಿಸಿಕೊಂಡು ಬರುತಿದ್ದಳು, ಒಮ್ಮೆ ಮೂವಿ ನೊಡಲು ಬರ್ತೀಯಾ, ಎಂದು ಕೇಳಿದಾಗ, ಹಿಂದು ಮುಂದು ನೋಡದೆ ಬೈಕ್ ಏರಿ ಕುಳಿತಳು. ಅಲ್ಲಿಂದ ಶುರುವಾದದ್ದು, ನನ್ನ ದಿನಚರಿಯಲ್ಲಿ ಗೆಳತಿಯರ ಸಂಖ್ಯೆ ಬೆಳೆಯುತ್ತ ಹೋಯಿತು, ಯಾರಿಗೂ ಅಂಟಿಕೊಳ್ಳದೆ ಒಂದು ಹೂವಿನಿಂದ ಮತ್ತೊಂದು ಹೂವಿಗೆ ಹಾರುವು ದುಂಬಿಯಂತೆ ಬೆಳೆಯತೊಡಗಿದೆ. ನಾನು ಅರಿತುಕೊಳ್ಳುವ ಮೊದಲೇ ಈ ಹುಚ್ಚು ನನ್ನನಾವರಿಸಿತ್ತು. ಕಾಲೇಜು ಮುಗಿದು, ಅಪ್ಪನ ಪ್ರಿಂಟಿಂಗ್ ಪ್ರೆಸ್ ನೋಡಿಕೊಳ್ಳಲಾರಂಬಿಸಿದರೂ, ನನ್ನ ಹುಚ್ಚು ಬೆಳೆಯುತ್ತಲೇ ಹೋಯಿತು.

ಈ ಮಧ್ಯ ಅಪ್ಪ ಅಮ್ಮ, ಮದುವೆಯಾಗು ಎಂದು ನನ್ನನು ಪೀಡಿಸಲಾರಂಭಿಸಿದರು. ನನಗೆ ಮದುವೆ ಬೇಕಿಲ್ಲದಿದ್ದರೂ, ಬೇಡ ಎನ್ನುವದಕ್ಕೂ ಯಾವ ಕಾರಣವಿಲ್ಲದ್ದರಿಂದ, ಮದುವೆಯಾಗಲು ಒಪ್ಪಿದ್ದೆ. ನೋಡಲು ಸುಂದರವಾಗಿದ್ದ ಪದ್ಮಳನ್ನು ನನಗೆ ತೋರಿಸಿದರು, ನಾನು ಒಪ್ಪಿದೆ. ಪದ್ಮಳೊಡನೆ ನನ್ನ ಮದುವೆಯಾಯಿತು. ಪದ್ಮಳೊಡನೆ ನಾನು ಯಾವತ್ತೂ ಅತ್ಮೀಯತೆಯಿಂದ ಒಬ್ಬ ಸಾಮಾನ್ಯ ಗಂಡನಂತೆ ನಡೆದುಕೊಳ್ಳಲೇ ಇಲ್ಲ. ಇವಳು ಒಂದು ಹೂವು ಮಾತ್ರವಾಗಿದ್ದಳು. ಪದ್ಮ ಮೊದಮೊದಲು ನನ್ನಿಂದ ಬದಲಾವಣೆಯನ್ನು ಬಯಸಿ, ನನ್ನೊಡನೆ ಜಗಳವಾಡುತಿದ್ದಳು. ನನ್ನನ್ನು ಹೊರಗಡೆ ಕರೆದುಕೊಂಡು ಹೋಗಿ, ನಿಮ್ಮ ಮನಸ್ಸಿನಲ್ಲಿರುವುದನ್ನೆಲ್ಲಾ ಹೇಳಿ ಎಂದು ಪ್ರಾಣ ಹಿಂಡುತಿದ್ದಳು. ನಾನೊ ಕಲ್ಲಿನಂತಿದ್ದೆ, ನನಗೆ ಬರಿ ಪಡೆದುಕೊಳ್ಳುವುದು ಮಾತ್ರ ಗೊತ್ತಿತ್ತು, ಕೊಡುವುದನ್ನು ಎಂದೂ ಕಲಿಯಲೇ ಇಲ್ಲ. ಕ್ರಮೇಣ ನನ್ನ ಎಲ್ಲ ಬಣ್ಣಗಳನ್ನು ಅರಿತ ಅವಳು, ಮೌನದ ಮೊರೆಹೋಗಿಬಿಟ್ಟಳು. ಈ ಮಧ್ಯ ವಿಜಯ, ವಿಕ್ರಮರು ಹುಟ್ಟಿದ್ದು, ಬೆಳೆದಿದ್ದು ನನ್ನ ಗಮನಕ್ಕೆ ಅಷ್ಟಾಗಿ ಬರಲೇ ಇಲ್ಲಾ. ನಾನು ಅವರಿಗೆ ತಂದೆಯಾಗಿದ್ದರೆ ತಾನೆ ಅದೆಲ್ಲಾ ತಿಳಿಯುತಿದ್ದುದು, ಅವರು ಏನು ಒದುತಿದ್ದಾರೆಂದು ಕೂಡ ತಿಳಿದುಕೊಳ್ಳಲು ಪ್ರಯತ್ನಿಸಿರಲಿಲ್ಲ. ಮೂರುಹೊತ್ತು, ಪ್ರಿಂಟಿಂಗ್ ಪ್ರೆಸ್ ಮತ್ತು ನನ್ನ ಗೆಳತಿಯರು, ನೀರಿನಂತೆ ಹಣ ಕರ್ಚಾಗುತಿತ್ತು, ಕೂತು ತಿನ್ನುವಷ್ಟು ಹಣವಿದ್ದುದರಿಂದ, ನನಗೆ ಕೊರತೆ ಕಾಣಿಸಲಿಲ್ಲ. ಕ್ರಮೇಣ ವಯಸ್ಸಾದಂತೆ, ಎಂದೂ ಯಾರಿಗು ಆಂಟಿಕೊಳ್ಳದ ನನಗೆ, ಈಗ ಸಂಬಂದಗಳು ಬೇಕೆನಿಸುತ್ತಿದೆ, ಗಂಡನಾಗಬೇಕು, ತಂದೆಯಾಗಬೇಕೆನಿಸುತ್ತಿದೆ. ಈಗ ನನಗೆ ಅತ್ಮೀಯತೆಯ ಅಗತ್ಯ ಕಾಣಿಸುತ್ತಿದೆ, ನಾನು ಬದುಕಿರಲು, ನನ್ನ ಉಸಿರಿನೊಡನೆ ನನ್ನನ್ನು ಆತ್ಮೀಯವಾಗಿ ನೊಡುವು ಕಣ್ಣುಗಳು, ಮಾತಾಡುವ ಬಾಯಿಗಳು, ಕೇಳುವ ಕಿವಿಗಳು ಬೇಕೆನಿಸುತ್ತಿದೆ. ಆದರೆ ಈ ಬೇಕುಗಳು ಈಗ ನನಗೆ ಸಿಗದಷ್ಟು ದೂರ ಹೋಗಿಬಿಟ್ಟಿದ್ದೀನಿ ಎಂಬ ಅರಿವು ಬಂದು ಕಣ್ಣಿನಲ್ಲಿ ನೀರು ತುಂಬಿಕೊಂಡಿತು.

1 thoughts on “ಪೂರ್ಣವ ಕೊಡದೆ ಪೂರ್ಣವ ಪಡೆವುದೆಂತು?

ನಿಮ್ಮ ಟಿಪ್ಪಣಿ ಬರೆಯಿರಿ