jump to navigation

ನಿರೀಕ್ಷೆ – ಒಂದು ಸಣ್ಣ ಕತೆ ಡಿಸೆಂಬರ್ 8, 2007

Posted by Bala in ಸಣ್ಣಕತೆ.
Tags:
trackback

ನಾನು ನರಹರಿ ಮದುವೆಯಾಗಿ ಎಂಟು ವರುಷಗಳಾಯಿತು. ನರಹರಿ ನನಗೆ ಹೇಳಿ ಮಾಡಿಸಿದಂಥಾ ಗಂಡ, ನಮ್ಮಿಬ್ಬರದೂ ಅನ್ಯೋನ್ಯವಾದ ಸಂಬಂಧ, ನನಗಿದ್ದ ಒಂದೆ ಕೊರತೆಯೆಂದರೆ, ನಮಗೆ ಮಕ್ಕಳಿಲ್ಲ ಎಂಬುದು. ವೈದ್ಯರಿಗೆ ತೋರಿಸಿದ್ದಾಯಿತು, ದೋಷವಿರೊದು ನನ್ನಲ್ಲೆ ಎಂದು ಗೊತ್ತಾದ ದಿನದಿಂದ ಎನೋ ಒಂದು ರೀತಿ ಅಳುಕು, ದೋಷ ನನಲ್ಲಿದ್ದು ನನ್ನಿಂದ ನರಹರಿ ಕೂಡಾ ಮಕ್ಕಳಿಲ್ಲದ ಕೊರಗು ಕೊಡುತಿದ್ದೇನಲ್ಲಾ ಎಂಬ ದುಃಖ. ಕೊನೆಗೊಮ್ಮೆ ನರಹರಿಗೆ ಇನ್ನೊಂದು ಮದುವೆಯಾಗಲು ಸೂಚಿಸಿದಾಗ, “ನಿನಗೇನಾದರೂ ಬುದ್ದಿಗಿದ್ದಿಯಿದೆಯಾ? ಮಕ್ಕಳಾಗದಿದ್ದರೇನು, ನಾವಿಬ್ಬರು ಅನ್ಯೋನ್ಯವಾಗಿ ಕೊನೆವರಗೂ ನನಗೆ ನೀನು ನಿನಗೆ ನಾನು, ಜೀವನದಲ್ಲಿ ಇದಕ್ಕಿಂತ ಹೆಚ್ಚೀನನ್ನು ಬಯಸಿದವನಲ್ಲ, ಇನ್ನೆಂದೂ ಈ ರೀತಿ ಮಾತಾಡಬೇಡಾ” ಎಂದು ನನಗೆ ಚೆನ್ನಾಗಿ ಬೈದು ಹೇಳಿದ. ನರಹರಿಯ ಮಾತು ಕೇಳಿದಾಗ ಹೌದು ನಮಗಿನ್ನೇನು ಬೇಕು, ಯಾವುದಕ್ಕೂ ಕೊರತೆಯಿರಲಿಲ್ಲ, ಅದರೂ ನಮ್ಮಲ್ಲಿ ಎನಿಲ್ಲವೊ ಅದರ ಸೆಳೆತ ಹೆಚ್ಚಾಗಿ ಕೆಲವೊಮ್ಮೆ ನರಹರಿಯ ಮನಸ್ಸು ನೊಯಿಸಿದ್ದು ಇದೇ, ಅದಾದ ಮೇಲೆ ಕ್ಷಮೇ ಕೇಳಿ ಅತ್ತಿದ್ದೂ ಉಂಟು. ಪ್ರಪಂಚದಲ್ಲಿ ಎಷ್ಟೋ ವೈಚಿತ್ರಗಳು ನಡೆಯುತ್ತವಂತೆ, ಈ ವೈದ್ಯರ ಮಾತು ಸುಳ್ಳಾಗಿ ನನಗೆ ಮಗುವಾದರೆ.. ಆಲೋಚನೆಯಲ್ಲಿ ಮುಳುಗಿದ್ದಾಗ, ಯಾರೊ ಬಾಗಿಲು ಬಡಿದಂತಾಯ್ತು.

ಮಂಚದ ಮೇಲೆ ಮಲಗಿ ಯೋಚಿಸುತಿದ್ದ ನಾನು, ಎದ್ದು ಬಾಗಿಲು ತೆಗೆದರೆ ಶಾರದಮ್ಮನ ಮಗ ನಾಗು ಏದುಸಿರು ಬಿಡುತ್ತಾ ನಿಂತಿದ್ದ ಅವನನ್ನು ಕಂಡು, “ಏನಪ್ಪ” ಎಂದೆ. ಏದುಸಿರಿನಲ್ಲೆ, “ನಮ್ಮಮ್ಮ ನಿಮ್ಮನ್ನ ಈಗ್ಲೇ ಕರ್ಕೊಂಡ್ಬಾ ಅಂದ್ರು” ಎಂದ.
“ಯಾಕೊ” ಎಂದೆ.
ಅದಕ್ಕೆ “ನಂಗೊತ್ತಿಲ್ಲಾ” ಎಂದ.
ನನಗೆ ಮಾಡಲು ಏನೂ ಕೆಲಸವಿಲ್ಲದ್ದಿರಿಂದ, “ಬರ್ತೀನಿ ಅಂತ ಅಮ್ಮನಿಗೆ ಹೇಳು” ಎಂದೆ.
ತಕ್ಷಣ, ಮೆಟ್ಟಿಲಿಳಿದು ಓಡಿದ, ಅವನು ರಸ್ತೆ ತಿರುಗಿ ಮರೆಯಾಗುವವರೆಗೂ ಬಾಗಿಲಲ್ಲೆ ನೋಡುತ್ತಾ ನಿಂತೆ. ಅವನು ಓಡುವಾಗ ಸ್ಕೂಟರ ಒಡಿಸುವವನಂತೆ ಕೈ ಹಿಡಿದು ಪುರ್ ಎಂದು ಶಬ್ದ ಮಾಡುತ್ತಾ ಒಡುವುದನ್ನು ನೋಡಿ ನಗು ಬಂತು. ನಾಗು ಎಂಟು ವರ್ಷದ ಹುಡುಗ, ತೆಳು ಮೈಕಟ್ಟು, ಆಕರ್ಶಕ ಮುಖ, ಅವನನ್ನು ನೋಡಿದಾಗಲೆಲ್ಲಾ, ನನಗೂ ಇಂಥಾ ಒಬ್ಬ ಮಗನಿರಬಾರದಿತ್ತೇ ಎನಿಸುತಿತ್ತು.

ಬೆಂಗಳೂರಿಗೆ ಬಂದು ಎರಡು ವರುಷವಾಯಿತು, ಬಾಡಿಗೆ ಮನೆಯಲ್ಲಿ ನಾನೂ ನರಹರಿ ವಾಸ ಮಾಡುತಿದ್ದೆವು. ಬಂದ ಹೊಸತರಲ್ಲಿ ಯಾರೂ ಪರಿಚಯವಿರಲ್ಲ್ಲ. ನಾನು ತರಕಾರಿಗೆ ಹೋಗುವಾಗ, ಶಾರದಮ್ಮನ ಪರಿಚಯವಾಯಿತು. ಸ್ವಲ್ಪ ವಾಚಾಳಿಯಾದರೂ ಶಾರದಮ್ಮ ನನಗೆ ಬಲು ಹಿಡಿಸಿದರು. ಶಾರದಮ್ಮನ ಜೊತೆ ಮಾತಿಗೆ ಕುಳಿತರೆ ಹೊತ್ತು ಕಳೆಯುವುದೇ ತಿಳಿಯುತ್ತಿರಲಿಲ್ಲ. ನರಹರಿ ಕೆಲಸಕ್ಕೆ ಹೊದಮೇಲೆ, ಹೊತ್ತು ಕಳೆಯಲು ಶಾರದಮ್ಮನ ಮನೆಯ ಜಗುಲಿಮೇಲೆ ಕುಳಿತು ಹರಟೇ ಹೊಡೆ ಯುವುದು ನನ್ನ ನಿತ್ಯ ದಿನಚರಿಯಾಗಿತ್ತು. ನಾನು ಹೆಚ್ಚು ಮಾತಾಡುತ್ತಿರಲಿಲ್ಲ, ಅಲ್ಲಿ ಇರುತಿದ್ದ ಶಾರದಮ್ಮ ಹಾಗೂ ಇತರರು ಮಾತಾಡುವುದನ್ನು ಕೇಳುತ್ತಾ ಕುಳಿತಿರುತಿದ್ದೆ. ನಾನು ಏನೇ ಕೊಳ್ಳ ಬೇಕೆಂದಿದ್ದರೂ ಶಾರದಮ್ಮನನ್ನೂ ಕರೆದೊಯ್ಯುತಿದ್ದೆ, ಚೌಕಾಸಿ ಮಾಡುವುದರಲ್ಲಿ ಶಾರದಮ್ಮ ಎತ್ತಿದ ಕೈ. ಆತ್ಮೀಯರಾದ ಶಾರದಮ್ಮನ ಬಳಿ ನಾನು ಏನನ್ನೂ ಮುಚ್ಚಿಟ್ಟಿರಲಿಲ್ಲ. ಇಂದು ಯಾಕೆ ಹೇಳಿಕಳಿಸಿದರೋ ತಿಳಿಯಲ್ಲಿಲ್ಲ, ಹೋಗಿ ಬರೋಣವೆಂದು ಸೀರೆ ಸರಿಮಾಡಿಕೊಂಡು, ತಲೆ ಬಾಚಿಕೊಂಡು ಮನೆಗೆ ಬೀಗ ಹಾಕಿ ಶಾರದಮ್ಮನ ಮನೆಯ ಕಡೆ ಹೆಜ್ಜೆ ಹಾಕಿದೆ.

ಶಾರದಮ್ಮನ ಮನೆಯ ಜಗಲಿಯ ಮೇಲೆ ಗಡ್ಡಾಧಾರಿಯಾದ ಒಬ್ಬ ಬುಡುಬುಡಿಕೆಯವನು ಶಾರದಮ್ಮನ ಜೊತೆ ಮಾತಾಡುತ್ತಿರುವುದು ಕಂಡುಬಂತು. ಹತ್ತಿರ ಬಂದಾಗ, ಶಾರದಮ್ಮ ಕಣ್ಸನ್ನೆ ಮಾಡಿ ನನ್ನನ್ನು ಮನೆಯ ಒಳಗೆ ಕರೆದೊಯ್ದು, “ಈ ಬುಡುಬುಡಿಕೆಯವನು ಮಕ್ಕಳಿಲ್ಲದವರಿಗೆ ಮಕ್ಕಳಾಗುವಂತೆ ಮಾಟಮಾಡಿಸ್ತಾನಂತೆ, ಅವನು ಹೇಳಿದ್ದೆಲ್ಲಾ ಕೇಳಿದರೆ ನಂಬುವಂತಿದೆ, ನಿಮ್ಮ ಕಷ್ಟ ನೋಡಿ ನೋಡಿ, ನೀವು ಯಾಕೆ ಈತ ಹೇಳಿದಂತೆ ಮಾಡಬಾರದು, ಕಳೆದು ಕೊಳ್ಳುವುದೇನಿಲ್ಲಾ, ಕೊಂಚ ಹಣ, ದಾನ್ಯ, ಯೋಚಿಸಿ, ನೀವು ಹೂಂ ಅಂದರೆ ಅವನ ಬಳಿ ಮಾತಾಡೋಣ” ಎಂದು ಹೇಳಿ ನನ್ನ ಪ್ರತಿಕ್ರಿಯೆಯನ್ನು ಎದುರು ನೋಡುತಿದ್ದರು .

ಸಾಮಾನ್ಯವಾಗಿ ಇಂತದ್ದನ್ನೆಲ್ಲಾ ನಾನು ನಂಬುತ್ತಿರಲಿಲ್ಲ. ಎಂದೂ ಈ ಬಗೆಯ ಆಲೋಚನೆ ಕೂಡಾ ಬಂದಿರಲಿಲ್ಲ. ಆದರೂ ನನ್ನ ವೈಚಾರಿಕತೆಯನ್ನು ಮೀರಿದ ಮನಸ್ಸು, ಯಾವುದಾದರೂ ಪವಾಡದಿಂದಲಾದರು ನನಗೆ ಮಗುವಾದರೆ ಸಾಕು ಎಂದು ಬಯಸುತಿತ್ತು. ಶಾರದಮ್ಮ ನವರು ನನ್ನ ಬಗ್ಗೆ ಇಟ್ಟಿದ್ದ ಪ್ರೀತಿಯ ಅರಿವಾಗಿ, ಆಕೆ ನನ್ನ ಒಳಿತಿಗಾಗಿ ಯೋಚಿಸಿರುವುದು ನನ್ನ ಮನಸ್ಸನ್ನು ಮೃದುವಾಗಿಸಿತು. ಶಾರದಮ್ಮ ಹೇಳಿದಂತೆ ಬರೀ ಹಣ, ದಾನ್ಯ ಹೋಗುವಂತಿದ್ದರೆ ಯಾಕೆ ಪ್ರಯತ್ನಿಸಬಾರದು ಎನ್ನಿಸಿತು.

ನನ್ನ ಪ್ರತಿಕ್ರಿಯೆಯನ್ನು ಎದುರು ನೋಡುತಿದ್ದ ಶಾರದಮ್ಮನವರಿಗೆ ಒಂದು ಸಣ್ಣ ನಗುವಿನಿಂದ ನನ್ನ ಸಮ್ಮತಿ ಸೂಚಿಸಿ, ಶಾರದಮ್ಮ ನಾನು ಹೊರಗೆ ಜಗಲಿಯಮೇಲೆ ಬಂದೆವು. ಶಾರದಮ್ಮ ಬುಡುಬುಡಿಕೆಯವನಿಗೆ, “ಇವರೇ ಸೀತಮ್ಮ ಅಂತ” ಎಂದರು. ಎಲ್ಲಾ ಅರ್ಥವಾದಂತೆ, ಬುಡುಬುಡಿಕೆಯವನು ನನ್ನನ್ನು ಹತ್ತಿರ ಕರೆದು ಕುಳಿತುಕೊಳ್ಳುವಂತೆ ಹೇಳಿ ನನ್ನ ಕೈ ತೋರಿಸುವಂತೆ ಹೇಳಿದ.

ನನ್ನ ಕೈ ಧೀರ್ಘವಾಗಿ ನೋಡಿದ ನಂತರ, “ನಿಮಗೆ ಯಾರೊ ಮಾಟಾ ಮಾಡಿಸಿದ್ದಾರೆ, ಅದರಿಂದಾಗಿ ನಿಮಗೆ ಮಕ್ಕಳಾಗುತ್ತಿಲ್ಲಾ, ನಾನು ನಿಮಗಾಗಿ ಸ್ಮಶಾನದಲ್ಲಿ ಆ ಮಾಟವನ್ನು ಯಾರು ಮಾಡಿಸಿದರೋ ಅವರಿಗೇ ತಿರುಗಿಸುತ್ತೇನೆ. ನೀವು ಹೂಂ ಎಂದರೆ, ಮುಂದಿನ ಅಮಾವಾಸ್ಯಯ ದಿನ ನಿಮಗಾಗಿ ಈ ಕೆಲಸಮಾಡುತ್ತೇನೆ” ಎಂದ.

ನನಗ್ಯಾಕೊ ಆತನ ಮಾತುಗಳ ಮೇಲೆ ನಂಬಿಕೆಬರುತ್ತಿಲ್ಲಾ, ಆದರೂ, ಸರಿ ಇದಕ್ಕಾಗಿ ನಿನಗೆ ನಾವೇನು ಕೊಡಬೇಕಪ್ಪ ಎಂದೆ.
ಅದಕ್ಕೆ ಬುಡುಬುಡಿಕೆಯವನು, “ಒಂದೊಂದು ಸೇರು ನವದಾನ್ಯ, ಐದು ನೂರು ರುಪಾಯಿ” ಎಂದ.

ನನಗೆ ಸಂಪೂರ್ಣ ನಂಬಿಕೆಯೂ ಇಲ್ಲಾ, ಆದರೂ ಆತ ಕೇಳುತ್ತಿರುವುದೇನು ಹೆಚ್ಚಲ್ಲಾ, ಕೊನೆಗೂ ಹೊಯ್ದಾಡಿದ ಮನಸ್ಸು, “ಸರಿ ಇಲ್ಲೇ ಇರಪ್ಪ ನಾನು ಮನೆಗೆ ಹೋಗಿ ನೀನು ಕೇಳಿದ್ದನ್ನೇಲ್ಲಾ ತಂದು ಕೊಡ್ತೀನಿ” ಎಂದು ಹೇಳಿ ಹೊರಡಲನುವಾದೆ.

ಅದಕ್ಕೆ ಶಾರದಮ್ಮ, “ಅಯ್ಯೊ ಸೀತಾ ಇದಕ್ಯಾಕೆ ಮನೇಗೋಗ್ ಬರ್ತಿಯಾ, ಸದ್ಯಕ್ಕೆ ನಾನು ಕೊಟ್ಟಿರ್ತೀನಿ, ಆಮೇಲೆ ನೀನು ನನಗೆ ತಂದು ಕೊಡುವಿಯಂತೆ, ಒಟ್ಟಿನಲ್ಲಿ ನಿನಗೆ ಒಳ್ಳೆದಾದ್ರೆ ಅಷ್ಟೇ ಸಾಕು” ಎಂದು ಎದ್ದು ಮನೆ ಒಳಗೆ ಹೋದರು.

ಶಾರದಮ್ಮ ಬುಡುಬುಡಿಕೆಯವನಿಗೆ ಹಣ ದಾನ್ಯವನ್ನು ಕೊಡುವವರೆಗೂ ಗೋಡೆಗೊರಗಿ ಮಾತು ಕಳೆದುಕೊಂಡವಳಂತೆ ಆಕಾಶವನ್ನು ದಿಟ್ಟಿಸಿ ನೋಡುತ್ತಾ ಕಳೆದುಹೊಗಿದ್ದ ನಾನು ಎಚ್ಚರವಾಗಿ ಆ ಬುಡುಬುಡಿಕೆಯವನಿಗೆ, “ನೀನು ಮಾಟಾ ತೆಗೆಸಿದ ಮೇಲೆ ನನಗೆ ಮಕ್ಕಳು ನಿಜವಾಗಿಯೂ ಆಗತ್ತಾ” ಎಂದು ಕೇಳಬೇಕೆನಿಸಿ ನೊಡಿದರೆ, ಆತ ಅಲ್ಲಿರಲಿಲ್ಲ.

Advertisements

ಟಿಪ್ಪಣಿಗಳು»

1. shreekant.mishrikoti - ಡಿಸೆಂಬರ್ 11, 2007

ಸಾಹೇಬ್ರ ,

ಕತಿ ಇಲ್ಲಿಗೇ ಮುಗೀತೋ , ಅಥವಾ ಇನ್ನೂ ಅದSನೊ?

ನಿಮ್ಮ
ಶ್ರೀಕಾಂತ

2. balaglobal - ಡಿಸೆಂಬರ್ 11, 2007

ಸದ್ಯಕ್ಕೆ ನಿಂತಿದೆ, ಸ್ಪೂರ್ತಿ ಬಂದಾಗ ಮುಂದುವರೆಸುವೆ.

ಧನ್ಯವಾದಗಳು
ಬಾಲ.

3. ಭಾರತಿ - ಡಿಸೆಂಬರ್ 19, 2007

ಈ ಕತೆ ಮುಂದುವರಿತ್ತ ನೀವು ಇದರ ಬಗ್ಗೆ ನಂಬಿಕೆ ಇಟ್ಟು ಕೊಂಡಿದ್ದಿರ

4. balaglobal - ಡಿಸೆಂಬರ್ 19, 2007

ಇಲ್ಲಿ ಮುಖ್ಯ ಸೀತಾಳ ಮನಸ್ಸಿನ ತಲ್ಲಣಗಳು, ತನಗೆ ದೊರೆಯದ ವಸ್ತುವನ್ನು ತನ್ನದಾಗಿಸಿಕೊಳ್ಳಬಯಸುವ ಮನಸ್ಸಿನ ಚಿತ್ರಣ. ಕತೆ ಮುಂದುವರೆದ ಮೇಲೆ ಓದಿ, ಇನ್ನೂ ನಿಮಗೆ ಈ ಪ್ರೆಶ್ನೆ ಕೇಳಬೇಕೆನಿಸಿದರೆ ಕೇಳಿ…

ಧನ್ಯವಾದಗಳು
ಬಾಲ

5. Sowmyashree - ಜೂನ್ 21, 2013

ಈ ಕತೆ ಇನ್ನು ಮುಂದು ವರೆದಿಲ್ಲ.. ದಯವಿಟ್ಟು ಮುಂದುವರೆಸಿ… ನಿಮ್ಮ ಪ್ರಯತ್ನ ಬಹಳ ಚೆನ್ನಾಗಿದೆ.. ನಾನು ನಿಮ್ಮ ಬರಹಗಳನ್ನು ಬೇರೆಯವರಿಗೂ ಕಳಿಸುತ್ತಿರುತ್ತೇನೆ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: