ಮೌಲ್ಯಗಳ ಅವನತಿ – ಒಂದು ವಿವೇಚನೆ ನವೆಂಬರ್ 30, 2007
Posted by Bala in ಬದುಕು.Tags: ಮೌಲ್ಯಗಳ ಅವನತಿ
6 comments
ಯಾವುದೇ ಕಾಲದ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, ಅಲ್ಲಿ ನಮಗೆ ಒಂದು ಕಡೆ, ಆ ಕಾಲದ ಮೌಲ್ಯಗಳನ್ನು ಅದರ ಹಿಂದಿನ ಕಾಲದ ಮೌಲ್ಯಗಳಿಗೆ ಹೋಲಿಸಿ, ಮೌಲ್ಯಗಳ ಅವನತಿ ಯಾಗಿದೆ ಎಂಬ ಒಂದು ಲೇಖನ ಕಣ್ಣಿಗೆ ಬಿದ್ದೇ ಬೀಳುತ್ತದೆ. ಹಾಗೆ ಕಾಲ ಕೆಟ್ಟುಹೋಯಿತು ಎಂಬ ಹೇಳಿಕೆ ಸರ್ವೇ ಸಾಮಾನ್ಯವಾಗಿ ಎಲ್ಲ ಕಾಲದಲ್ಲೂ ಕೇಳಿ ಬರುವ ಮಾತು. ಈಗಿನ ಸಮಾಜದಲ್ಲಿ ಮೌಲ್ಯಗಳ ಅವನತಿಯಾಗುತ್ತಿದೆಯೆ? ಕಾಲ ನಿಜವಾಗಿಯು ಕೆಟ್ಟುಹೊಗಿದೆಯೆ? ಎಂಬ ಪ್ರೆಶ್ನೆಗೆ ಉತ್ತರ ಹೌದು, ಇಲ್ಲ.
ಈಗ ಒಂದು ಸನ್ನಿವೇಶವನ್ನು ಗಮನಿಸೊಣ ಒಬ್ಬ ಪ್ರಾಮಾಣಿಕ ನಾದ ಲೋಕಾಯುಕ್ತನು ಒಬ್ಬ ಕುಖ್ಯಾತ ಲಂಚಕೊರನನ್ನು ಆಧಾರ ಸಮೇತವಾಗಿ ಹಿಡಿದರು. ಈ ಸನ್ನಿವೇಶದಲ್ಲಿ ನೀವು ಲಂಚಕೋರನನ್ನು ಅವನ ಮೌಲ್ಯಗಳನ್ನು ನೋಡಿದರೆ, ಹೌದು ಈಗಿನ ಸಮಾಜದಲ್ಲಿ ಮೌಲ್ಯಗಳ ಅವನತಿಯಾಗಿದೆ. ಈ ಲಂಚಕೋರ ಸಮಾಜದ ಒಂದು ಭಾಗಕ್ಕೆ ಮಾದರಿಯಾಗಿದ್ದಿರಬಹುದು. ಆದರೆ ಲಂಚ ಯಾವ ಕಾಲದಲ್ಲಿರಲಿಲ್ಲ. ಚಾಣಕ್ಯ ತನ್ನ ಅರ್ಥಶಾಸ್ತ್ರದಲ್ಲಿ ಒಂದು ಮಾತನ್ನು ಹೇಳುತ್ತಾನೇ. ಮೀನು ನೀರಿನಲ್ಲೇ ಇರುವುದರಿಂದ ಅದು ನೀರು ಕುಡಿಯದೇ ಇರುವಂತೆ ಎಚ್ಚರವಿರ ಬೇಕು ಅಂದರೆ ಹಣದ ಲೆಕ್ಕಾಚಾರದಲ್ಲಿರುವವನು ಹಣವನ್ನು ದುರುಪಯೊಗ ಮಾಡಿಕೊಳ್ಳಬಹುದು ಆದ್ದರಿಂದ ಈ ವಿಚಾರದಲ್ಲಿ ಯಾವಾಗಲೂ ಎಚ್ಚರಿಕೆಯಿಂದಿರಬೇಕು ಎನ್ನುತ್ತಾನೆ. ಹೀಗೆ ಲಂಚ ಮೊಸ ವಂಚನೆ ಎಲ್ಲ ಮನುಷ್ಯನ ಇತಿಹಾಸದಷ್ಟೇ ಹಳೆಯದು. ಇಲ್ಲಿ ಲಂಚವನ್ನು ಸಮರ್ಥಿಸುತ್ತಿಲ್ಲಾ, ಆದರೆ ಅದು ಈ ಸಮಾಜದಲ್ಲಿ ಮಾತ್ರ ಸೀಮಿತವಾಗಿರಲಿಲ್ಲ ಎಂಬುದನ್ನು ವಿವರಿಸಲು ಪ್ರಯತ್ನಿಸುತಿದ್ದೇನೆ.
ಮೇಲೆ ವಿವರಿಸಿದ ಸನ್ನಿವೇಶದ ಇನ್ನೊಂದು ಮುಖ ಮೌಲ್ಯಾಧಾರಿತವಾದ ಲೋಕಾಯುಕ್ತರು. ಈ ಮುಖವನ್ನು ನೊಡಿದರೆ ಮೌಲ್ಯಗಳು ಸಂಪೂರ್ಣಕುಸಿದಿಲ್ಲ ಎಂದು ತೋರಿಸುತ್ತದೆ. ಯಾವುದೇ ಸನ್ನಿವೇಶವನ್ನು ಸಂಪೂರ್ಣ ವಾಗಿನೊಡಿದಾಗ ಒಂದು ಮುಖದಲ್ಲಿ ಮೌಲ್ಯ ಕುಸಿದಿರುವುದು ಕಂಡರೆ ಇನ್ನೊಂದು ಮುಖ ಮೌಲ್ಯಗಳು ಬದುಕಿರುವುದನ್ನು ತೋರಿಸುತ್ತದೆ. ಹೀಗೆ ಯಾವುದೇ ಸನ್ನಿವೇಶದ ಪೂರ್ಣಗೋಲವು ಈ ಎರಡು ಮುಖಗಳಿಂದ ಕೂಡಿದ್ದು , ಇವೆರೆಡನ್ನೂ ಒಟ್ಟಿಗೆ ನೋಡಿದಾಗ ಮಾತ್ರ ಅದು ಸಂಪೂರ್ಣವಾಗುವುದು ಬರೀ ಅರ್ಧ ಮುಖವನ್ನು ನೋಡಿದರೆ ದೊರೆಯುವುದು ಅರ್ಧ ಸತ್ಯ ಮಾತ್ರ.
ಮೌಲ್ಯ ಕುಸಿಯಿತು ಅಥವಾ ಕಾಲ ಕೆಟ್ಟುಹೋಯಿತು ಎನ್ನುವವರನ್ನು ಮನಶ್ಯಾಸ್ತ್ರದ ಪ್ರಕಾರ ಹೀಗೆ ವಿವರಿಸಬಹುದೇನೊ. ಕೆಲವು ವ್ಯಕ್ತಿಗಳಿಗೆ ತಮ್ಮ ಜೀವನದ ಒಂದು ಭಾಗ ಸುವರ್ಣಯುಗ ವೆಂದು ನಂಬಿಬಿಟ್ಟಿರುತ್ತಾರೆ. ಇಂತಹ ವ್ಯಕ್ತಿಗಳಿಗೆ ಇಂದಿನ ಕೆಲವು ಕೆಟ್ಟ ಸನ್ನಿವೇಶಗಳ ಕೆಟ್ಟ ಮುಖವನ್ನು ಕಂಡಾಗ, ತಮ್ಮ ಆಗಿ ಹೋದ ಸುವರ್ಣಯುಗದ ಮೌಲ್ಯಗಳೇ ಶ್ರೇಷ್ಟ ಎನಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಹಾಗೆಯೆ ನಾವು ಎನನ್ನು ನೊಡಲು ಬಯಸುತ್ತೇವೊ, ಅದೇ ನಮಗೆ ಎಲ್ಲಾ ಕಡೆ ತಾಂಡವವಾಡುತ್ತಿರುವಂತೆ ಗೋಚರಿಸುತ್ತದೆ. ನಾವು ಎಲ್ಲವನ್ನೂ ಸಕಾರತ್ಮಕವಾಗಿ ಕಾಣುವುದರಿಂದ ನಕಾರತ್ಮಕ ಭಾವನೆಗಳು ದೂರವಾಗುತ್ತವೆ. ಇಲ್ಲಿ ಕೆಟ್ಟವರನ್ನು ಖಂಡಿಸುವುದು ತಪ್ಪು ಎಂದು ಹೇಳುತ್ತಿಲ್ಲ, ಕೆಟ್ಟವರನ್ನು ಹಿಡಿಯುವುದು, ತಪ್ಪನ್ನು ಖಂಡಿಸುವುದು ಯಾವುದೇ ಆರೋಗ್ಯಕರವಾದ ಸಮಾಜದ ಒಂದು ಪ್ರಮುಖ ಗುಣವಾಗಿರಬೇಕು. ತಪ್ಪು ಮಾಡಿದವರನ್ನು ಖಂಡಿಸಿ ಯಾರೂ ಬೇಡಾ ಎನ್ನುವುದಿಲ್ಲ ಅದರೆ ಮೌಲ್ಯ ಮತ್ತು ಕಾಲದ ತಂಟೆಗೆ ಹೋಗದಿದ್ದರೆ ಸಾಕು.
ಗುಂಗಿನ ಮತ್ತು ನವೆಂಬರ್ 23, 2007
Posted by Bala in ಬದುಕು.Tags: ಆರೊಗ್ಯ
add a comment
ಇವತ್ತು ಯಾಕೊ ಗೊತ್ತಿಲ್ಲ ಬೆಳಗಿನಿಂದ ’ಗುಂಗು’ ಪದದ ಮತ್ತೇರಿದೆ ನನಗೆ. ಯಾರ್ಯಾರ್ಗೊ ಎನೇನಕ್ಕೊ ಮತ್ತೇರುತ್ತಂತೆ, ನನಗ್ಯಾಕೆ ಗುಂಗು ಎಂಬ ಪದದ ಬಗ್ಗೆ ಮತ್ತೇರಬಾರದು, ನೀವೆ ಹೇಳಿ ಇದರಲ್ಲೇನಾದರೂ ತಪ್ಪಿದ್ದರೆ. ನೀವೇನಾದರೂ ಇದರಲ್ಲಿ ತಪ್ಪಿದೆ ಎಂದರೆ, ನಮ್ಮ ಪ್ರೀತಿಯ ಯಂಡ್ಕುಡುಕ ರತ್ನ ಹೇಳ್ದಂಗೆ, ಮೂಗ್ ಮೂರ್ ಚೂರಾಗಿ ಕುಯಿಸ್ಕಂತೀನಿ ನಿಮ್ಮಾತಿಗ್ ಆಡ್ಡ್ ಬಂದ್ರೆ. ಆಲ್ಲಾ ಗುಂಗು ಅಂದ್ರೇನು ಸಾಮಾನ್ಯ ಅಂತೀರ, ಪ್ರಪಂಚದಲ್ಲೀರುವವರೆಲ್ಲಾ ಒಂದಲ್ಲಾ ಒಂದು ರೀತಿ ಗುಂಗಿನಲ್ಲಿರುವವರೇ, ಒಂದೇ ವ್ಯತ್ಯಾಸ ಎಂದರೆ ಗುಂಗು ಯಾವುದರಿಂದ ಉಂಟಾಯಿತು ಎಂಬುದು.
ಯಾರೊ ಕೆಲವರು ಒಂದು ಸುಂದರ ಕವಿತೆ ಓದಿ, ದಿನವಿಡಿ ಅದರ ಗುಂಗಿನಲ್ಲಿದ್ದರೆ, ಕೆಲವರು ಹುಚ್ಚು ಹಿಡಿಸುವ ಸಿನೇಮಾ ಗೀತೆಗಳ ಗುಂಗಿನಲ್ಲಿರುತ್ತಾರೆ. ಮತ್ತೆ ಕೆಲವರು ಸುಂದರವಾದ ಕಾದಂಬರಿಯನ್ನು ಒದಿ ಅಲ್ಲಿರುವ ಪಾತ್ರದೊಂದಿಗೆ ತಮ್ಮನ್ನೇ ಹೊಲಿಸಿಕೊಂಡು ಅದೇ ಗುಂಗಿನಲ್ಲಿರುತ್ತಾರೆ. ಇನ್ನೂ ಕೆಲವರಿಗೆ ಬರೆಯೊದರಲ್ಲಿ ಗುಂಗು. ಇಲ್ಲಿ ವಿವರಿಸಿದಂತ ಗುಂಗನ್ನು ತನ್ಮಯತೆ, ಪರವಶತೆ ಎಂದೂ ಕೂಡಾ ಕರೆಯುತ್ತಾರೆ. ಈ ಬಗೆಯ ಗುಂಗನ್ನು ಯಾರು ಎಷ್ಟು ಬೇಕಾದರೂ ಪಡೆಯಬಹುದು , ಯಾವಾಗ ಬೇಕಾದರೂ ಹೊಂದಬಹುದು, ಕಾಸು ಕರ್ಚಿಲ್ಲಾ (ಲೈಬ್ರರಿ ಬುಕ್ ಒದುವುದರಿಂದ!!, ಪುಕ್ಕಟ್ಟೆ ಬ್ಲಾಗ್ ಬರಿಯೊದರಿಂದ!!) ಎಲ್ಲಕ್ಕಿಂತಾ ಹೆಚ್ಚಾಗಿ ಆರೊಗ್ಯಕ್ಕೇನೂ ತೊಂದರೆಯಿಲ್ಲ ಬದಲಾಗಿ ವ್ಯಕ್ತಿಯ ಅರೋಗ್ಯ ಉತ್ತಮ ಗೊಳ್ಳಬಹುದು. ಇಷ್ಟೆಲ್ಲಾ ಪ್ರಯೊಜನಗಳಿದ್ದರೂ ಈ ಬಗೆಯ ಗುಂಗಿಗೆ ಅಂಟಿಕೊಳ್ಳುವವರೂ ನಿಜಕ್ಕೂ ಅಲ್ಪಸಂಖ್ಯಾತರು.
ಆದರೆ ಗುಂಗು ಪದದ ವ್ಯಾಪಕವಾದ ಅರ್ಥ ಅಮಲು, ಮಾದಕ ಪದಾರ್ಥಗಳ ಸೇವನೆಯಿಂದ ಉಂಟಾಗುವ ಜೊಂಪು. ಈ ಬಗೆಯ ಗುಂಗನ್ನು ಪಡೆಯಲು ಕಾಸು ಖರ್ಚು , ಅರೋಗ್ಯಕ್ಕೂ ಹಾನಿಕರ. ಹಾಗಿದ್ದರೂ ಈ ಗುಂಗಿಗೆ ಅಂಟಿಕೊಂಡಿರುವರ ಸಂಖ್ಯೆ ಹೆಚ್ಚು (ಮಹಾಸಂಖ್ಯಾತರು ಎನ್ನಬಹುದೇನೊ). ಗುಂಡಿನ ಮತ್ತೇ ಘಮ್ಮತ್ತು, ಅಳತೇ ಮೀರಿದರೇ ಅಪತ್ತು. ಸಾಮಾನ್ಯವಾಗಿ ಆಳತೆಗಿಂತಾ ಹೆಚ್ಚಾಗಿ ಕುಡಿದವರು , ಬೆಳಿಗ್ಗೇ ಎದ್ದಾಗ ಇನ್ನೂ ಹ್ಯಾಂಗೊವರ್ ನಲ್ಲೇ ಇರುತ್ತಾರೆ. ಈ ಬಗೆಯ ಹ್ಯಾಂಗೊವರ್ ಒಂದುರೀತಿ ಮನಸ್ಸಿಗೆ ಅಹಿತವಾಗಿರುತ್ತದೆ, ಯಾವ ಕೆಲಸ ಮಾಡಲೂ ಮನಸ್ಸಿರುವುದಿಲ್ಲ. ಒಟ್ಟಾರೆ ಹೇಳಬೇಕೆಂದರೆ ಮಿತವಾಗಿ ಕುಡಿಯುವಾಗ ಸಿಗುವ ಗುಂಗು ಉತ್ತಮವಾದರೆ, ಮಿತಿಯಿಲ್ಲದೇ ಕುಡಿದಾಗ ಉಂಟಾಗುವ ಹ್ಯಾಂಗೊವರ್ ಅಧಮ.
ಹ್ಯಾಂಗೊವರ್ ಹೇಗೆ ಉಂಟಾಗುತ್ತದೆ ಎಂಬುದನ್ನು ಗಮನಿಸಿದರೆ ಮಿತಿಯಿಲ್ಲದ ಕುಡಿತ ಕಡಿಮೆಯಾಗಬಹುದು. ಅಲ್ಕೊಹಾಲ್ ಒಂದು ಬಗೆಯ ವಿಷ, ನಮ್ಮ ದೇಹದಲ್ಲಿ ಎಲ್ಲ ಬಗೆಯ ವಿಷಗಳನ್ನು ಅರಗಿಸುವುದು ಲಿವರ್‍ನ ಕೆಲಸ. ಮಿತವಾಗಿ ಕುಡಿದಾಗ ಲಿವರ್ , ಅಲ್ಕೋಹಾಲನ್ನು ಅರಗಿಸಿಕೊಳ್ಳುತ್ತದೆ. ಹಾಗಲ್ಲದೆ ಪ್ರತಿಬಾರಿ ಈ ರೀತಿ ವಿಷವನ್ನು ಅರಗಿಸಿಕೊಳ್ಳುವ ಲಿವರ್‍ಗೆ ಮತ್ತೆ ಚೇತರಿಸಿ ಕೊಳ್ಳಲು ಸಮಯ ಬೇಕು. ಆದರೆ ಮಿತಿಮೀರಿ ಕುಡಿದಾಗ, ಇರುವ ಸಣ್ಣ ಲಿವರ್ ತನಗಾದಷ್ಟು ಅಲ್ಕೊಹಾಲನ್ನು ಅರಗಿಸ್ಕೊಂಡು ಸುಸ್ತಾದಗ, ಮಿಕ್ಕ ಅಲ್ಕೊಹಾಲ್ ಇನ್ನೂ ರಕ್ತದಲ್ಲಿ ಸಂಚರಿಸುತ್ತಿರುತ್ತದೆ. ರಕ್ತದಲ್ಲಿ ಸಂಚರಿಸುತ್ತಿರುವ ಈ ಅಲ್ಕೊಹಾಲ್ ಹ್ಯಾಂಗೋವರ್‍ಗೆ ಕಾರಣ. ಒಟ್ಟಾರೆ ನೀವು ಕುಡಿದಿದ್ದನ್ನು ಅರಗಿಸಿಕೊಳ್ಳುವುದರಲ್ಲಿ ನಿಮ್ಮ ಲಿವಿರ್ ಸೊತಿದೆ ಎಂದು ಹೇಳಬಹುದು. ದಿನಾಗಲೂ ಮಿತಿಯಿಲ್ಲದೇ ಕುಡಿದು ಲಿವರ್‍ನ ಮೇಲೆ ಒತ್ತಡ ಹೇರಿದರೆ ಲಿವರ್ಹೋಸಿಸ್ ಎಂಬ ಖಾಯಿಲೆ ಬರಬಹುದು. ನಮಗೆ ಗೊತ್ತಿಲ್ಲದೇ ಎಷ್ಟೊ ಬಗೆಯ ವಿಷಗಳು ನಮ್ಮ ಹೊಟ್ಟೆಯನ್ನು ಸೇರುತ್ತಿರುತ್ತವೆ , ಇವೇ ನಮ್ಮ ಲಿವರ್ರಿಗೆ ಸಾಕಷ್ಟು ಕೆಲಸ ಕೊಡುತ್ತಿರುವಾಗ, ನಮಗೆ ಗೊತ್ತಿದ್ದು ಅಲ್ಕೊಹಾಲ್ ನಂತಹ ವಿಷವನ್ನು ಯಾಕೆ ನಮ್ಮ ದೇಹದೊಳಗೆ ಸೇರಿಸಿ, ಇರುವ ಒಂದು ಸಣ್ಣ ಲಿವರ ಮೇಲೆ ಹೆಚ್ಚು ಒತ್ತಡ ಉಂಟುಮಾಡಬೇಕು.
ಜಗತ್ತಿನಲ್ಲಿ ಯಾವುದು ಸುಂದರ? ನವೆಂಬರ್ 15, 2007
Posted by Bala in ಬದುಕು.Tags: ಸುಂದರ
add a comment
ಜಗತ್ತಿನಲ್ಲಿ ಯಾವುದು ಸುಂದರ? ಒಮ್ಮೆ ನನ್ನ ಸ್ನೇಹಿತನೊಬ್ಬ ಈ ಪ್ರಶ್ನೆಯನ್ನು ಕೇಳಿದ್ದ, ಅದಕ್ಕೆ ನಾನು ನಿಸರ್ಗ ಎಂದುತ್ತರಿಸಿದೆ. ಆದಕ್ಕೆ ಮುಗುಳ್ನಗುತ್ತಾ (ಅಂದರೆ ನಾನು ಹೇಳಿದ್ದು ಸರಿಯಲ್ಲ ಎಂಬ ಭಾವನೆಯೊಂದಿಗೆ) ಆತ ಹೇಳಿದ ಇಲ್ಲಾ ಪ್ರಪಂಚದಲ್ಲಿ ಹೆಣ್ಣಿನ ದೇಹವೇ ಅತಿ ಸುಂದರ. ನಾನು ಹೇಳಿದೆ, ನೀನೊಬ್ಬ ಹುಡುಗ ಅದಕ್ಕೆ ನಿನಗೆ ಹೆಣ್ಣಿನ ದೇಹ ಸುಂದರ ಎನಿಸುತ್ತದೆ, ಇದೇ ಪ್ರೆಶ್ನೆಯನ್ನು ಯಾವುದಾದರೂ ತುಂಟಹುಡುಗಿಗೆ ಕೇಳಿದ್ದರೆ ಬೇರೆಯದೇ ಉತ್ತರ ಬರುತಿತ್ತೇನೊ, ಅಲ್ಲದೇ ಸಾಮಾನ್ಯವಾಗಿ ನಿಸರ್ಗವನ್ನು ಹೆಣ್ಣಿಗೆ ಹೋಲಿಸುತ್ತಾರೆ, ಹಾಗಾಗಿ ನನ್ನ ಮೊದಲನೇ ಉತ್ತರವಾದ ನಿಸರ್ಗ ಹೆಣ್ಣನ್ನೂ ಸೇರಿಸಿಕೊಳ್ಳುತ್ತದೆ ಎಂದು ನನ್ನ ವಾದವನ್ನು ಮುಂದಿಟ್ಟೆ. ಏನೇ ವಾದಿಸಿದರು ’ವಾದಿರಾಜ’ನಾದ ನನ್ನ ಸ್ನೇಹಿತ ತನ್ನ ಪಟ್ಟು ಬಿಡುವಂತೆ ಕಾಣಲಿಲ್ಲ.
ಒಮ್ಮೆ ಸರ್.ಎಮ್. ವಿಶ್ವೇಶರಯ್ಯನವರು ಜೋಗದ ಜಲಪಾತವನ್ನು ನೊಡಲು ಹೋಗಿದ್ದರಂತೆ. ಅವರ ಸುತ್ತ ಇದ್ದವರು ಆ ಜಲಪಾತದ ಸೌಂದರ್ಯವನ್ನು ವರ್ಣಿಸುತಿದ್ದರೆ, ವಿಶ್ವೇಶರಯ್ಯನವರು ಚಿಂತಿತರಾದಂತೆ ಕಂಡಿತಂತೆ, ಯಾರೊ ಒಬ್ಬರು ಕಾರಣ ಕೇಳಿದಾಗ ವಿಶ್ವೇಶರಯ್ಯನವರು ಹೇಳಿದರಂತೆ, ಇಲ್ಲಿ ಎಷ್ಟೋಂದು ಶಕ್ತಿ ವ್ಯರ್ಥವಾಗುತ್ತಿದೆಯಲ್ಲ ಎಂದು ಚಿಂತೆಯಾಗಿದೆ ಎಂದು ಉತ್ತರಿಸಿದರಂತೆ. ಜಲಪಾತ ಮೂಲತಃ ಇಂಜಿನಿಯರ್ ಆದ ವಿಶ್ವೇಶರಯ್ಯನವರಿಗೆ ಶಕ್ತಿ ಉತ್ಪಾದನಾ ಕೇಂದ್ರವಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಯಾರೊ ಹೇಳಿದಂತೆ ಸೌಂದರ್ಯ ನೊಡುಗನ ಕಣ್ಣಿನಲ್ಲಿರುತ್ತದೆ. ಒಬ್ಬನಿಗೆ ಸುಂದರವಾದದ್ದು ಮತ್ತೊಬ್ಬನಿಗೆ ಸುಂದರವಾಗಿರಬೇಕಂತೇನಿಲ್ಲ.
ಸಾಮಾನ್ಯವಾಗಿ ನಾವೆಲ್ಲರೂ ಕೆಲವನ್ನು ಸುಂದರ ಎಂದು ನಂಬಿಬಿಟ್ಟಿರುತ್ತೇವೆ, ಯಾಕೆಂದರೆ ನಮ್ಮ ನೆಚ್ಚಿನ ಕವಿ ಅಥವಾ ಬರಹಗಾರ ಅಥವಾ ಪ್ರಸಿದ್ದ ವ್ಯಕ್ತಿ ಯಾವುದೋ ವಸ್ತುವನ್ನು ಸುಂದರ ಎಂದು ಹೊಗಳಿದ್ದರೆ ಸಾಕು, ಆತನ/ಆಕೆಯ ರುಚಿಯನ್ನು ಸಂಪೂರ್ಣ ನಂಬಿರುವ ನಮ್ಮಂತವರು, ಆ ವಸ್ತುವಿನಲ್ಲಿ ನಾವು ವಸ್ತುತಃ ಸೌಂದರ್ಯವನ್ನು ಕಾಣದಿದ್ದರೂ ಅದು ಸುಂದರ ಎಂದು ನಂಬಿರುತ್ತೇವೆ. ಸಾಮಾನ್ಯ ಸೂರ್ಯೋದಯವನ್ನು ಎಲ್ಲ ಕವಿಗಳೂ ವರ್ಣಿಸಿದ್ದಾರೆ, ನಾವು ಒಮ್ಮೆ ಬೇಗ ಎದ್ದು ಮನೆ ಮಹಡಿ ಮೇಲೆ ಹೋಗಿ ಆಗತಾನೆ ಉದಯಿಸುತ್ತಿರುವ ಸೂರ್ಯನನ್ನು ನೋಡಿ ವಾವ್ ಎಂತ ಸುಂದರ ಸೂರ್ಯೋದಯ ಎಂದು ಉದ್ಗಾರ ತೆಗೆಯುತ್ತೇವೆ, ಇದು ಬಾಯಿಂದ ಬಂದ ವಾಕ್ಯವೇ ಹೊರತು ಮನಸ್ಸಿನ ಆಳದಿಂದ ಬಂದದ್ದಲ್ಲ. ಅದು ನಿಜವಾಗಿ ಮನಸ್ಸಿನ ಆಳದಿಂದ ಬಂದಿದ್ದರೆ ಆಗ ಈ ವಾಕ್ಯ ಅರ್ಥಪೂರ್ಣವಾದದ್ದು.
ಜಗತ್ತಿನಲ್ಲಿ ಯಾವುದು ಸುಂದರ? ಎಂಬ ಪ್ರಶ್ನೆಗೆ ಈಗ ನನ್ನ ಉತ್ತರ, ಯಾವ ವಸ್ತುವನ್ನು ನಾವು ನೊಡಿದಾಗ ಅದು ನಮ್ಮ ಅಂತರಾಳದಲ್ಲಿ ಆನಂದವನ್ನು ಉಂಟುಮಾಡುವುದೊ ಅದೇ ಸುಂದರ. ಇದನ್ನೇ ಮುಂದುವರೆಸಿ ಯಾರ ಮನಸ್ಸು ಮುಕ್ತವಾಗಿಯೂ ಹಾಗು ಪ್ರಶಾಂತವಾಗಿಯೂ ಇರುತ್ತದೋ ಅಂತವರಿಗೆ ಜಗತ್ತಿನ ಎಲ್ಲಾ ವಸ್ತುಗಳಲ್ಲೂ ಸೌಂದರ್ಯಕಾಣುತ್ತದೆ.
ಮಾತು ಮನೆ ಕೆಡಿಸ್ತು ತೂತು ಒಲೆ ಕೆಡಿಸ್ತು ನವೆಂಬರ್ 7, 2007
Posted by Bala in ಜನಪದ, ಬದುಕು, ಹಾಸ್ಯ, ಹರಟೆ.Tags: ನುಡಿ, ಮಾತು
3 comments
ಮಾತು ಮನೆ ಕೆಡಿಸ್ತು ತೂತು ಒಲೆ ಕೆಡಿಸ್ತು , ಎಂಥಾ ಮಹತ್ವವಾದ ಗಾದೆ ಇದು. ಅನವಶ್ಯಕವಾದ ಮಾತಿನ ದ್ವೇಶಿಯಾದ ನನ್ನಂತವರಿಗೆ ಇದು ವೇದ ವಾಕ್ಯ (ವೇದಕ್ಕಿಂತ ಗಾದೇನೆ ಮೇಲು ಅನ್ನೊ ಗಾದೆಯ ಪ್ರಕಾರ). ಇಲ್ಲಿ ಗಾದೆಯ ಮೊದಲನೇ ಭಾಗವನ್ನು ಮಾತ್ರವೇ ಗಮನಿಸಲಾಗಿದೆ.. ನಾವು ಜೀವನಕ್ಕೆ ಎಷ್ಟು ಬೇಕೊ ಅಷ್ಟು ಮಾತಾಡೊದರಿಂದ ಎನೂ ಅನಾಹುತ ಅಗಲ್ಲ. ಅನವಶ್ಯಕವಾಗಿ ಆಡುವ ಅಥವಾ ಆಡಿದ ಮಾತುಗಳು ಅನಾಹುತಕ್ಕೆ ಕಾರಣ. ಎಲ್ಲಿ ಬೇಡವೊ ಅಲ್ಲಿ ಏಡೆಯಿಲ್ಲದೆ ಮತಿಯಿಲ್ಲದೆ ಆಡಿದ ಮಾತುಗಳು ಖಂಡಿತ ಮನೆಯನ್ನು ಕೆಡಿಸುತ್ತದೆ, ಮನವನ್ನು ಕೆಡಿಸುತ್ತದೆ ಎಲ್ಲಕ್ಕಿಂತ ಹೆಚ್ಚಾಗಿ ಮಾತಾಡುವವನ ಅರೊಗ್ಯವನ್ನು ಕೆಡಿಸುತ್ತದೆ. ನಿಜ ಮಾತಾಡುವುದು ಮನುಷ್ಯನ ಆರೊಗ್ಯವನ್ನು ಕೆಡಿಸುತ್ತದೆ. ನಾವು ಮಾತಾಡುವಾಗ, ಉಸಿರಾಡುವುದಿಲ್ಲ. ಅಂದರೆ ನಾವು ಮಾತಾಡುತ್ತಿರುವಾಗ ಉಸಿರಾಡುವುದನ್ನು ನಿಲ್ಲಿಸಿರುತ್ತೇವೆ. ನೀವು ಶಂಕರ್ ಮಹಾದೇವನ್ ನ ಬ್ರೆತ್ ಲೆಸ್ ಎಂಬ ಹಾಡನ್ನು ಕೇಳಿದ್ದರೆ ನಾನು ಹೇಳುತ್ತಿರುವುದು ಸುಲಭವಾಗಿ ಅರ್ಥವಾಗುತ್ತದೆ. ಆತ ಸುಮಾರು ಮೂರು ನಿಮಿಶಗಳಕಾಲ ಸತತವಾಗಿ ಹಾಡನ್ನು ಹಾಡಿದ್ದಾನೆ, ಹಾಡಿನ ಕೊನೆಯಲ್ಲಿ ಆತ ದೀರ್ಘವಾಗಿ ಉಸಿರೆಳೆದುಕೊಳ್ಳುವುದನ್ನು ನೀವು ಕೇಳಿರಬಹುದು. ಹೀಗಾಗಿ, ವಾಚಾಳಿಗಳೂ ಉಸಿರಾಡುವುದನ್ನು ಮರೆತು ಮಾತಿಗಿಳಿದಿರುತ್ತಾರೆ, ಆವೇಶಭರಿತವಾದ ಮಾತು ಇನ್ನೂ ಅಪಾಯಕಾರಿ, ಯಾಕೆಂದರೆ ಇದು ಉಸಿರಾಡುವುದನ್ನು ಮರೆಸುವುದರೊಂದಿಗೆ ನಮ್ಮ ಹೃದಯದ ಬಡಿತವನ್ನು ಏರಿಸುತ್ತದೆ. ಹೀಗೆ ಉಸಿರಾಡುವುದನ್ನು ಮರೆತರೆ, ನಮ್ಮ ದೇಹಕ್ಕೆ ಸತತವಾಗಿ ಬೇಕಾಗಿರುವ ಆಮ್ಲಜನಕ ನಮ್ಮ ದೇಹವನ್ನು ಸೇರದೇ ನಮ್ಮ ಆರೋಗ್ಯ ಕೆಡಬಹುದು.
ಮನುಷ್ಯನ ದೇಹದಲ್ಲಿ ಎಲ್ಲಾ ಎರಡೆರೆಡು, ಎರಡು ಕೈ, ಎರಡು ಕಾಲು, ಎರಡು ಕಿವಿ, ಎರಡು ಕಣ್ಣು ಆದರೆ ಒಂದೇ ಬಾಯಿ. ಸಧ್ಯ ನಮಗೇನಾದರು ಎರಡು ಬಾಯಿದ್ದಿದ್ದರೆ, ನಮ್ಮ ವಾಚಾಳಿ ಮಿತ್ರರು ತಿನ್ನುವಾಗಲೂ ಮಾತು ಮುಂದುವರೆಸುತ್ತಿದರೇನೊ. ಮಾತು ಬೆಳ್ಳಿ ಮೌನ ಬಂಗಾರ, ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಗಳು ಮಾತಿನ ಬೆಲೆ ಮತ್ತು ಮಾತನ್ನು ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಹೇಳುತ್ತದೆ . ಬುದ್ಧ ಆಸೆಯೆ ದುಃಖಕ್ಕೆ ಮೂಲ ಎಂದು ಸಾರಿದ್ದರೆ, ನಾವು ಅನವಶ್ಯಕವಾದ ಮಾತೇ ದುಃಖಕ್ಕೆ ಮೂಲ ಎಂದು ಡಂಗುರ ಸಾರಿ ಹೇಳಬಹುದೇನೊ!!
ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಗಾದೆ, ಆಡಿದ ಮಾತನ್ನು ಮತ್ತೆ ಹಿಂದೆ ತೆಗೆದುಕೊಳ್ಳಲು ಅಗುವುದಿಲ್ಲ ಅದು ಕೈ ಜಾರಿದ ಮುತ್ತು ಒಡೆದಂತೆ ಎಂದು ಹೇಳುತ್ತದೆ. ಮಾತು ಹೇಗಿರಬೇಕೆಂದರೆ ನಮ್ಮ ಬಸವಣ್ಣನವರು ಈ ವಚನದಲ್ಲಿ ಹೇಳಿರುವಂತಿರಬೇಕು.
ನುಡಿದರೆ ಮುತ್ತಿನಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು
ಇದನ್ನು ಓದುತ್ತಿರುವ ವಾಚಾಳಿ ಮಿತ್ರರೆಲ್ಲಾ ನನಗೆ ಹಿಡಿ ಶಾಪ ಹಾಕಿ, “ಮಾತಿನನಗರ” ವೊಂದನ್ನು ಸ್ಥಾಪಿಸಿ, ಅಲ್ಲಿ ವಾಚಾಳಿಗಳಿಗೆ ಮಾತ್ರ ಸ್ವಾಗತ ಎಂಬ ನಿಯಮವನ್ನು ಹಾಕಿ, ಮಾತಿನ ದ್ವೇಶಿಗಳನ್ನು ಚಂದ್ರಲೋಕಕ್ಕೆ ಹೊರಗಟ್ಟುವ ಆಂದೋಲನವನ್ನು ಶುರುಮಾಡಲಿದ್ದಾರಂತೆ!!