jump to navigation

ನಗು ಆಗಷ್ಟ್ 31, 2007

Posted by Bala in ಹಾಸ್ಯ, ಹರಟೆ.
add a comment

ತನಗೆ ತುಂಬ ಸಂತೋಷವಾದಾಗ ಮನುಷ್ಯನ ಮುಖದಲ್ಲಿ ಮೂಡುವ ಭಾವವೇ ನಗು. ನಗು ಸಾಮಾನ್ಯವಾಗಿ ಶಬ್ದವನ್ನು ಹೊಂದಿರುತ್ತದೆ. ನವರಸಗಳಲ್ಲಿ ಮುಖ್ಯವಾದ ರಸವೆಂದರೆ ಹಾಸ್ಯ, ಹಾಸ್ಯ ರಸದ ಸ್ಥಾಯಿಭಾವ ನಗು. ನಗುವಿನ ಸಮಾನಾಂತರ ಪದಗಳೂ, ಹಾಸ, ಸ್ಮೇರ, ಇತ್ಯಾದಿ.. ಡಿ.ವಿ.ಜಿ. ಯವರು ತಮ್ಮ ಈ ಪದ್ಯದಲ್ಲಿ ನಗು ವಿನ ಬಗ್ಗೆ  ಹೀಗೆ ಹೇಳುತ್ತಾರೆ.

ನಗುವು ಸಹಜದ ಧರ್ಮ ನಗಿಸುವುದು ಪರ ಧರ್ಮ
ನಗುವ ಕೇಳುತ ನಗುವುದು ಅತಿಶಯದ ಧರ್ಮ
ನಗುವ ನಗಿಸುವ, ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ

ನಗು ಎಷ್ಟು ಸಹಜ ಅಂದರೆ ಆಗತಾನೆ ಹುಟ್ಟಿದ ಮಗು ಕೂಡ ನಗಬಲ್ಲದು. ಹಾಗೆಯೆ ದುಃಖದಲ್ಲಿರುರುವರನ್ನ ನಗಿಸುವುದು ಇತರರ ಧರ್ಮ. ಯಾರೊ ಒಬ್ಬಾಕೆ ತನಗೆ ಕ್ಯಾನ್ಸರ್ ಇದೆ ಎಂದು ತಿಳಿದ ಮೇಲೆ, ಹೆಚ್ಚಾಗಿ ತಮಾಶೆಯಾದ ಸಿನೆಮಾ ಗಳನ್ನು ನೋಡಲು ಪ್ರಾರಂಬಿಸಿ, ತನ್ನ ಜೀವನದಲ್ಲಿ ನಗುವನ್ನು ಹೆಚ್ಚಿಸಿಕೊಂಡು ತನ್ನ ಕ್ಯಾನ್ಸರ್ ನಿಂದ ವಿಮುಖ್ತಳಾದಳಂತೆ. ನಗು ನಮ್ಮ ಅರೋಗ್ಯವನ್ನು ಸುಧಾರಿಸುವ ಔಷದ ಎಂಬುದು ಎಲ್ಲರಿಗೂ ತಿಳಿದ ಮಾತು.ಹಾಗೆಯೆ ನಗು ಸಾಂಕ್ರಾಮಿಕ, ಇನ್ನೊಬ್ಬರು ನಗುವುದನ್ನು ನೋಡಿ ನಮಗೂ ನಗು ಬರುತ್ತದೆ. ಇದರಿಂದಲೇ ಎನೊ ನಮ್ಮ ಎಲ್ಲಾ ಕಾಮಿಡಿ ಸೀರಿಯಲ್ ಗಳಲ್ಲಿ ಬ್ಯಾಗ್ರೌಂಡ್ ನಲ್ಲಿ ನಗುವನ್ನು ಬಳಸುತ್ತಾರೆ. ಇದನ್ನೇ ಡಿ.ವಿ.ಜಿ ಯವರು ಅತಿಶಯದ ಧರ್ಮ ಎಂದು ಕರೆದಿದ್ದಾರೆ. ಯಾವಗಲೂ ಎಲ್ಲರೂ ನಗುತ್ತಿರುವುದು ಸಾಧ್ಯವಿಲ್ಲ ಎಂದು ತಿಳಿದಿದ್ದರೂ, ನಗು ಯಾವಗಲೂ ನಮ್ಮ ಬದುಕಿನಲ್ಲಿ ಇರಲಿ ಎಂದು ಆಶಯಿಸುವುದು ಮತ್ತು ಹಾಗೆ ಇರಲು ಪ್ರಯತ್ನಿಸುವುದು ನಮ್ಮ ಜೀವನದ ಅತ್ಯುತ್ತಮ ಧ್ಯೇಯ.

ನಗುವಿನಲ್ಲಿ ಅನೇಕ ಬಗೆಗಳುಂಟು.ಅಟ್ಟಹಾಸ, ಮಂದಹಾಸ, ಗಹಗಹಿಸು, ದೇಶಾವರಿ ನಗೆ, ಹಲ್ಲುಕಿರಿ, ಹುಸಿನಗೆ ಇತ್ಯಾದಿ. ಹಾಗೆಯೆ, ಒಬ್ಬರ ನಗು ಮತ್ತೊಬ್ಬ ರ ನಗುವಿನಂತಿರುವುದಿಲ್ಲ. ತುಂಬಾ ಖುಷಿಯಾದಾಗ ಕಣ್ಣಲ್ಲಿ ನೀರು ಬರುವುದು ನಗುವಿನ ಮತ್ತೊಂದು ಗುಣ. ನಾನು ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿಗಳನ್ನು ಓದುವಾಗ ಎಷ್ಟೋ ಬಾರಿ ತುಂಬಾ ನಕ್ಕು ನಕ್ಕು ಕಣ್ಣಲ್ಲಿ ನೀರು ಬಂದಿದ್ದು  ನನ್ನ ನೆನಪಿನಲ್ಲಿದೆ.

ನಗುವುದರಿಂದ ಅಗುವ ಕೆಲವು ಪ್ರಯೊಜನಗಳು

೧. ನಗು ನಮ್ಮ ಹೃದಯದ ಆರೊಗ್ಯವನ್ನು ರಕ್ಷಿಸುತ್ತದೆ
೨. ನಗು ಮದುಮೇಹ ಇರುವವರಲ್ಲಿ, ರಕ್ತದಲ್ಲಿರುವ ಸಕ್ಕರೆಯನ್ನು ಕಡಿಮೆಗೊಳಿಸುತ್ತದೆ.
೩. ನಗು ದೇಹದಲ್ಲಿನ ರಕ್ತ ಸಂಚಲನೆಯನ್ನು ಸರಾಗಗೊಳಿಸುತ್ತದೆ.
೪. ನಗು ನಮ್ಮ ರೋಗ ನಿರೊಧಕ ಶಕ್ತಿಯನ್ನ್ನು ವೃದ್ದಿಗೊಳಿಸುತ್ತದೆ
೫. ನಗು ನಮ್ಮಲ್ಲಿನ ತಳಮಳವನ್ನು ನಿವಾರಿಸುತ್ತದೆ
೬. ನಗು ನಿದ್ರಾಹೀನತೆಯನ್ನು ತೊಲಗಿಸುತ್ತದೆ  ಇತ್ಯಾದಿ..

ಹಾಸ್ಯಯೋಗ ಶುರುವಾಗಿರುವುದು ನಗುವಿನ ಅರೊಗ್ಯ ವೃದ್ದಿ ಗುಣಗಳನ್ನು ಧೃಡಪಡಿಸುತ್ತದೆ. ಇಷ್ಟೆಲ್ಲಾ ನಗುವಿನ ಬಗ್ಗೆ ಬರೆದು, ಒಂದು ಜೋಕ್ ಹೇಳಿ ನಿಮ್ಮನ್ನು ನಗಿಸದಿದ್ದರೆ, ಈ ಲೇಖನ ಸಂಪೂರ್ಣವಾಗುವುದಿಲ್ಲ. ಕೆಲವು ಸರ್ದಾರ್ಜಿಯ ಜೊಕ್ ಗಳನ್ನು ಓದಿ ನಕ್ಕುಬಿಡಿ.

೧. ಒಮ್ಮೆ ಒಬ್ಬ ಸರ್ದಾರ್ಜಿ ಒಂದು ಅಂಗಡಿಗೆ ಹೋದ, ಅಲ್ಲಿ ಹೋಳೆಯುತ್ತಿದ್ದ ವಸ್ತುವೊಂದನ್ನು ತೋರಿಸಿ,
ಸರ್ದಾರ್ಜಿ: “ಅದು ಏನು” ಎಂದು ಕೇಳಿದ,
ವ್ಯಾಪಾರಿ: “ಅದು ಥರ್ಮಾಸ್ ಫ್ಲಾಸ್ಕ್”
ಸರ್ದಾರ್ಜಿ: “ಅದು ಏನು ಮಾಡುತ್ತೆ”
ವ್ಯಾಪಾರಿ: “ತಣ್ಣಗಿರುವುದನ್ನು ತಣ್ಣಗಿಡುತ್ತದೆ ಹಾಗು ಬಿಸಿಯಾಗಿರುವುದನ್ನು ಬಿಸಿ ಇಡುತ್ತದೆ” 
ಸರ್ದಾರ್ಜಿ: ಸರಿ ಹಾಗಿದ್ದರೆ ನನಗೆ ಅದು ಬೇಕು ಎಂದು ಅದನ್ನು ಕೊಂಡುಕೊಂಡನು.
ಮಾರನೇ ದಿನ ಆಫೀಸಿನಲ್ಲಿ ಬಾಸ್ ಸರ್ದಾರ್ಜಿಯ ಬಳಿ ಇದ್ದ ಆ ಹೊಳೆಯುವ ವಸ್ತುವನ್ನು ಕುರಿತು ಕೇಳಿದ
ಬಾಸ್: “ಅದು ಏನು” ಎಂದು ಕೇಳಿದ
ಸರ್ದಾರ್ಜಿ: “ಅದು ಥರ್ಮಾಸ್ ಫ್ಲಾಸ್ಕ್”
ಬಾಸ್: “ಅದು ಏನು ಮಾಡುತ್ತೆ”
ಸರ್ದಾರ್ಜಿ: “ತಣ್ಣಗಿರುವುದನ್ನು ತಣ್ಣಗಿಡುತ್ತದೆ ಹಾಗು ಬಿಸಿಯಾಗಿರುವುದನ್ನು ಬಿಸಿ ಇಡುತ್ತದೆ” 
ಬಾಸ್: “ಅದರಲ್ಲಿ ಎನಿಟ್ಟಿದ್ದೀಯಾ”
ಸರ್ದಾರ್ಜಿ:”ಎರಡು ಕಪ್ ಕಾಫಿ ಒಂದು ಕಪ್ ಕೋಕ್”

೨. ಸರ್ದಾರ್ಜಿಗಳೆಲ್ಲಾ ಒಂದು ಸಭೆ ಸೇರಿ ಪಂಜಾಬನ್ನು ಭಾರತದಿಂದ ಸ್ವತಂತ್ರವಾಗಿಸಬೇಕು ಎಂಬುದರ ಬಗ್ಗೆ ಚರ್ಚೆಮಾಡುತಿದ್ದರು. ಆಗ ಸಂತ ಸಿಂಗ್ ಹೇಳಿದ ” ಅದು ಸರಿ, ಭಾರತದಿಂದ ಪಂಜಾಬನ್ನು ಸ್ವತಂತ್ರ ಗೊಳಿಸಿದ ಮೇಲೆ ಅದನ್ನು ಅಭಿವೃದ್ದಿಗೊಳಿಸುವುದು ಹೇಗೆ” ಎಂದ. ಅದಕ್ಕೆ ಬಂಟ ಸಿಂಗ್ ಹೇಳಿದ “ತೊಂದರೆಯಿಲ್ಲ, ನಾವು ಅಮೇರಿಕ ದೇಶದ ಮೇಲೆ ಆಕ್ರಮಣ ಮಾಡೋಣ, ಆಗ ಅಮೇರಿಕ ನಮ್ಮನ್ನು ಸೋಲಿಸಿ ಪಂಜಾಬನ್ನು  ಸ್ಟೇಟ್  ಅಫ್ ಯು ಎಸ್ ಎ ಮಾಡಿಕೊಳ್ಳುತ್ತದೆ . ಆಗ ಪಂಜಾಬಿನ ಅಭಿವೃದ್ದಿ ತನಗೆ ತಾನೆ ಆಗುತ್ತದೆ”. ಈ ಮಾತನ್ನು ಕೇಳಿ ಎಲ್ಲರಿಗೂ ಸಂತೋಷವಾಯಿತು. ಆದರೆ ಒಬ್ಬ ಮುದುಕಮಾತ್ರ ಇನ್ನೂ ಚಿಂತಾಕ್ರಾಂತನಾಗಿ ಕುಳಿತಿರುವುದನ್ನು ನೋಡಿ, ಯಾರೊ ಒಬ್ಬರು ಅತನನ್ನು ಕೇಳಿದರು, “ಯಾಕೆ ನಿನಗೆ ಸಂತೋಷವಾಗಲಿಲ್ಲವೇ?”. ಅದಕ್ಕೆ ಅ ಮುದುಕನೆಂದ, “ಬಂಟಾ ಸಿಂಗ್ ಹೇಳಿದ್ದೇನೊ ಸರಿ, ಆದರೆ ಅಕಸ್ಮಾತ್ ನಾವೇನಾದರು ಅಮೇರಿಕಾ ದೇಶವನ್ನು ವಶಪಡಿಸಿಕೊಂಡರೆ ಮುಂದೆ ಏನಾಗುತ್ತೆ?”

ನೆನಪು ಆಗಷ್ಟ್ 19, 2007

Posted by Bala in ಬದುಕು.
Tags:
add a comment

ಮನುಷ್ಯನ ಬದುಕಿನಲ್ಲಿ ನೆನಪಿನ ಪಾತ್ರ ಬಹಳ ಮುಖ್ಯ. ನಮಗೆ ಯಾವುದು ನೆನಪಿಲ್ಲದೆ ಹೊದರೆ, ಈ ಸಮಾಜದಲ್ಲಿ ಬದುಕುವುದು ಬಹಳ ಕಷ್ಟ. ಅಂದರೆ ನಾವು ನಮ್ಮ ದೈನಂದಿನ ಕಾರ್ಯಗಳನ್ನು ಎಂದಿನಂತೆ ಮಾಡಿಕೊಂಡು ಹೊಗಲು ನೆನಪಿನ ಅವಶ್ಯಕತೆ ಬಹಳ ಇದೆ. ನಮ್ಮ ಮನಸ್ಸಿನ ನೆನಪುಗಳಲ್ಲಿ, ಸವಿನೆನಪುಗಳು ನಮ್ಮನ್ನು ಮುದಗೋಳಿಸಿದರೆ, ಕಹಿನೆನಪುಗಳು ನಮ್ಮನ್ನು ಹಿಂಸಿಸುತ್ತವೆ. ನಮ್ಮ ಸಿನೆಮಾ ಗೀತೆ ಹೇಳುವಂತೆ, ಸವಿನೆನಪುಗಳು ಬೇಕು ಸವಿಯಲೀ ಬದುಕು, ಕಹಿನೆನಪು ಸಾಕೊಂದು ಮಾಸಲೀ ಬದುಕು, ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲಾ ಕಾಡುತಿದೆ ಬದುಕು. ಹಾಗೆಯೆ, ಪ್ರೇ ಯಸಿಯ ನೆನಪು ಪ್ರಿಯಕರನ ಎದೆಯಲ್ಲಿ ಸದಾ ಇದ್ದು ಅಕೆಯನ್ನು ನೋಡಬೇಕೆನಿಸ್ಸುವ ಈ ಗೀತೆ.. ನಿನದೇ ನೆನಪು ದಿನವೂ ಮನದಲ್ಲಿ ನೋಡುವ ಆಸೆಯು ತುಂಬಿದೆ ನನ್ನಲಿ..

ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೇಗಳೂ ನಮ್ಮ ಮೆದುಳಿನ ಹಾರ್ಡ್ ಡಿಸ್ಕ್ ನಲ್ಲಿ ಮುದ್ರಿತಗೊಂಡಿದ್ದು, ನಮಗೆ ಬೇರೆ ಕೆಲಸವಿಲ್ಲದಿದ್ಡಾಗ, ನೆನಪುಗಳನ್ನು ಹೊರತೆಗೆದು ಆನಂದವನ್ನೊ, ಆತಂಕವನ್ನೊ ಹೊಂದುತ್ತೇವೆ. ನಮ್ಮ ನಿಸಾರ್ ಅಹ್ಮದ್ ರವರ, ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೇವವ ಹೂಡಿ ಬರುತಿದೆ ಮತ್ತೇ ಹಳೆಯ ನೆನಪು, ಗೀತೆ ನೆನಪು ಮನುಷ್ಯನ ಮನಸ್ಸಿನಲ್ಲಿ ಉಂಟು ಮಾಡುವ ತಲ್ಲಣಗಳನ್ನು ಅತ್ಯುತ್ತಮವಾಗಿ ವಿವರಿಸುತ್ತದೆ.

ನಾವು ಮಾಡುವ ಪ್ರತಿಯೊಂದು ಕ್ರಿಯಯ ಹಿಂದೆಯು ನೆನಪಿನ ಮುದ್ರೆಯಿರುತ್ತದೆ. ಹಾಗೆ ನೋಡಿದರೆ, ನಾವು ಮಾಡುವ ಪ್ರತಿಯೊಂದು ಕ್ರಿಯೆಯು, ನಮ್ಮ ಮನಸ್ಸಿನಲ್ಲಿ ನೆನಪಾಗಿ ಉಳಿಯುತ್ತವೆ. ಮುಂದೆ ನಾವು ಅದೇ ಕ್ರಿಯೆಯನ್ನು ಮಾಡಬೇಕಾದಾಗ, ಮನಸ್ಸು ನೆನಪಿನಲ್ಲಿರು ಹಳೆಯ ಕ್ರಿಯಯನ್ನು ನಿರ್ವಹಿಸಿದಂತೆ ಈಗಲೂ ಅದೇರೀತಿ ನಿರ್ವಹಿಸುತ್ತದೆ. ಅಂದರೆ ನಮ್ಮ ದೈನಂದಿನ ಕಾರ್ಯಗಳಲ್ಲಿ ಬಹುಪಾಲಿನ ಕ್ರಿಯೆಗಳನ್ನು ಮನಸ್ಸು ನೆನೆಪಿನ ಅಧಾರದಿಂದ ನಿರ್ವಹಿಸುತ್ತಾ ಹೊಗುತ್ತದೆ. ಒಮ್ಮೆ ಸೈಕಲ್ ಕಲಿತಮೇಲೆ, ನಮ್ಮ ಜೀವಮಾನ ಪೂರ್ತಿ ಅದನ್ನು ಮರೆಯುವುದಿಲ್ಲ. ಅಷ್ಟೆ ಅಲ್ಲಾ, ಒಮ್ಮೆ ಕಲಿತನಂತರ, ನಮ್ಮ ಅರಿವಿಗೇ ಬಾರದಂತೆ ಈ ಕ್ರಿಯೆಗಳು ನಡೆಯುತ್ತಿರುತ್ತವೆ. ನಾವು ಇನ್ಯಾವುದೊ ಯೊಚನೆಯಲ್ಲಿ ಮುಳಿಗಿದ್ದರು, ನಾವು ಹೊಗಬೇಕಾದ ಕಡೆ ಸೈಕಲ್ ನಡೆಸುತ್ತಿರುತೇವೆ. ನಮಗೆ ಅರಿವು ಬಂದಾಗಿನಿಂದ, ಮಾಡಿದ ಪ್ರತಿಯೊಂದು ಕ್ರಿಯೆಯನ್ನೂ, ಅದು ಒಳ್ಳೆಯದೊ ಅಥವ ಕೆಟ್ಟದ್ದೊ, ಆ ಕ್ರಿಯೆ ಮತ್ತೆ ಎದುರಾದರೆ ಯಾವ ರೀತಿ ಎದುರಿಸಬೇಕು, ಈ ಎಲ್ಲಾ ಅಂಶಗಳು ಮನಸ್ಸಿನಲ್ಲಿ ಶೇಖರಿಸಿಕೊಂಡು, ನಮ್ಮ ಮನಸ್ಸು ಸಂಕುಚಿತಗೊಳ್ಳುತ್ತಾ ಹೊಗುತ್ತದೆ.

ಈ ನೆನಪಿನ ಹಿಡಿತದಿಂದ ಹೊರಬರುವುದು ಹೇಗೆಂದು ನಾವು ಅರಿತರೆ, ಕಹಿನೆನಪುಗಳು ನಮ್ಮನ್ನು ಹಿಂಸಿಸುವಿದಲ್ಲವೊ ಎನೋ? ಸಂಕುಚಿತಗೊಂಡ ಮನಸ್ಸು ವಿಕಿಸಿತವಾದರೆ ನಾವು ನೆನಪಿನ ಹಿಡಿತದಿಂದ ಹೊರಬರಬಹುದು.

ನನ್ನ ಮೆಚ್ಚಿನ ವಚನಗಳು ಆಗಷ್ಟ್ 18, 2007

Posted by Bala in ಬದುಕು.
Tags: , , ,
3 comments

ನನ್ನ ಮೆಚ್ಚಿನ ಕೆಲವು ವಚನಗಳು.

ಅಲ್ಲಮ ಪ್ರಭುಗಳ ವಚನ

ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆ ಎಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ

ಬಸವಣ್ಣನವರ ವಚನ

ಕಳಬೇಡ ಕೊಲಬೇಡ
ಹುಸಿಯನುಡಿಯಲು ಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ದಿ
ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ

ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ನಮ್ಮ ಕೂಡಲಸಂಗಮದೇವಾ.

ಆಕ್ಕ ಮಹಾದೇವಿಯ ವಚನ

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
ಹದುಳಿಗರಲ್ಲದವರಲ್ಲಿ ಗಂದಾಕ್ಷತೆಯನೊಲ್ಲೆಯಯ್ಯ ನೀನು 
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯ.

 

ಬದುಕು ಆಗಷ್ಟ್ 5, 2007

Posted by Bala in ಬದುಕು.
add a comment

ಕನ್ನಡದ ಇಬ್ಬರು ಮೇರು ಕವಿಗಳು ಬದುಕನ್ನು ಹೇಗೆ ವರ್ಣಿಸಿರುವ ರೀತಿಯನ್ನು ಇಲ್ಲಿ ವಿವರಿಸಲಾಗಿದೆ. ನಮ್ಮ ಡಿ.ವಿ.ಗುಂಡಪ್ಪ ನವರು ಬದುಕನ್ನು ಹೀಗೆ ವಿವರಿಸಿದ್ದಾರೆ.

ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ
ಕುದುರೇ ನೀನ್ ಅವನು ಪೇಳ್ದಂತೆ ಪಯಣಿಗರು
ಮದುವೇಗೊ ಮಸಣಕೊ ಹೊಗೆಂದಕಡೆಗೋಡು
ಪದ ಕುಸಿಯೆ ನೆಲವಿಹುದು ಮಂಕುತಿಮ್ಮ
ಬದುಕು ವಿಧಿಯಾಟ, ವಿಧಿ ಹೇಳಿದಂತೇ ನಾವೆಲ್ಲರೂ ನಡೆದುಕೊಂಡು ಹೊಗುವುದೇ ಬದುಕು ಎಂಬುದು ಡಿ.ವಿ.ಗುಂಡಪ್ಪನವರ ಅನಿಸಿಕೆಯಾದರೆ, ಬೇಂದ್ರೆಯವರು ಬದುಕನ್ನು ಹೀಗೆ ವಿವರಿಸಿದ್ದಾರೆ. 

ಬದುಕು ಮಾಯೆಯ ಮಾಟ
ಮಾತು ನೆರೆ ತೊರೆಯಾಟ
ಜೀವಮೌನದ ತುಂಬ ಗುಂಭ ಮುನ್ನೀರು
ಅರುಣೊದಯದ ಕೂಡ ಕರುಣೊದಯವು
ಇರಲು ಎದೆಯ ತುಂಬುತ್ತಿದೆ ಹೊಚ್ಚಹೊನ್ನೀರು

ನಿಜದಲ್ಲೇ ಒಲವಿರಲಿ
ಚೆಲುವಿನಲೇ ನಲಿವಿರಲಿ
ಒಳಿತಿನಲೆ ಗೆಲುವಿರಲಿ ಜೀವ ಗೆಳೆಯ
ಈ ನಾನು ಆ ನೀನು
ಒಂದೆ ತಾನಿನ ತಾನು
ರಾಗ ಲಯ ತಾಳಗಳು ಸಹಜಬರಲಿ

ಆತನಾಕೆಯೆ ನಮ್ಮ
ಜೀವ ನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ದೇವ ಜೀವನ ಕೇಂದ್ರ
ಒಬ್ಬೊಬ್ಬನೂ ಇಂದ್ರ
ಏನಿದ್ದರೂ ಎಲ್ಲ ಎಲ್ಲೆ ತಿಳಿಯಾ

ಬದುಕು ಮಾಯೆಯ ಮಾಟ, ಮಾಯೆ ನಮ್ಮ ಬದುಕನ್ನು ನಡೆಸುವ ವಿಧಿಯಾಗಿರಬಹುದು. ಮಾತು ಎಷ್ಟೇ ಆಡಿದರೂ ಅದೂ ನಿಜವನ್ನೂ ತಿಳಿಸುವುದು ಸಾದ್ಯವಿಲ್ಲ, ನಿಜ ಇರುವ ಕಡೆ ಬೊಟ್ಟು ಮಾಡಿ ತೊರಿಸಬಹುದು. ಆದ್ದರೀಂದಲೇ ಮಾತು ಬರೀ ನೆರೆ ತೊರೆಯಾಟಾ, ಮಾತು ಆಳದ ಬಗ್ಗೆ ಹೇಳುವುದಿಲ್ಲಾ. ಮಾತು ಹೇಳದ್ದನ್ನ ಮೌನ ಹೇಳುತ್ತದೆ, ಮೌನದ ಆಳದಲ್ಲಿ ಸತ್ಯದ ಅರಿವಾಗುತ್ತದೆ. ಬದುಕಿನಲ್ಲಿ ಬಹು ಮುಖ್ಯವಾದ ಅಂಶ ಕರುಣೆ. ಕರುಣೆಯಿಂದ ತುಂಬಿದ ಬದುಕು ಯವಾಗಲೂ ಹಸನಾಗಿರುತ್ತದೆ. ನಮಗೆ ಯಾವಾಗಲೂ ನಿಜದಲ್ಲೇ ಒಲವಿರಲಿ, ಚೆಲುವು ನಲಿವನ್ನ ಕೊಟ್ಟರೆ, ಒಳಿತಿಗೆ ಎಂದೇದು ಗೆಲುವಿರುತ್ತದೆ. ನಾನು ನೀನು ಎಲಾ ಒಂದೇ ಅಂಶದಿಂದ ಹುಟ್ಟಿರುವ ಜೀವಗಳು.ಜೀವನದಲ್ಲಿ ಎಲ್ಲವೂ ಸಹಜವಾಗಿರಲಿ. ದೇವ ಜೀವನದ ಕೇಂದ್ರ, ನಾವೆಲ್ಲರೂ ಅವನ ಅಂಶವನ್ನು ಹೊಂದಿರುವ ಇಂದ್ರರು. ನಮ್ಮಲ್ಲಿ ಎನೇ ಇದ್ದರೂ ನಮ್ಮ ಮಿತಿಯನ್ನು ಅರಿತು ನಡೆಯುವುದು ಉತ್ತಮ ಬದುಕಿಗೆ ದಾರಿ