jump to navigation

ಎಲ್ಲಿ ಜಾರಿತೋ ನನ್ನ ಗುಂಡಿ!! July 24, 2008

Posted by balaglobal in ಸಣ್ಣಕತೆ.
Tags:
trackback

ಬೆಳಿಗ್ಗೆ ನನಗೆ ತುಂಬಾ ಇಷ್ಟವಾದ ಶರಟನ್ನು ಇಸ್ತ್ರೀ ಮಾಡುತ್ತಿರುವಾಗ, ಶರಟಿನ ಮಧ್ಯದ ಒಂದು ಗುಂಡಿ ಸಡಿಲವಾಗಿದ್ದು ಕಾಣಿಸಿತು, ಗುಂಡಿಯನ್ನು ಸ್ವಲ್ಪ ಎಳೆದು ನೋಡಿದೆ, ನಾಲ್ಕೋ ಐದೊ ದಾರಗಳಿದ್ದು ಸ್ವಲ್ಪ ಲೂಸಾಗಿದ್ದುದು ಕಂಡುಬಂತು. ಈ ಗುಂಡಿ ಇವತ್ತು ಕಿತ್ತು ಹೋಗುತ್ತೆ ಅನ್ನಿಸಿತು. ಆದರೆ, ಆಫೀಸಿಗೆ ಹೊರಡುವ ಸಮಯವಾಗಿದ್ದು, ಮತ್ತೊಂದು ಶರಟನ್ನು ಇಸ್ತ್ರೀಮಾಡುವಷ್ಟು ಸಮಯವಿರಲಿಲ್ಲ, ಇಷ್ಟು ದಿನ ಬದುಕಿದ ಗುಂಡಿ, ಇವತ್ತೊಂದು ದಿನ ಬದುಕತ್ತೆ, ಅಲ್ಲದೇ ಇದು ಮಧ್ಯದ ಗುಂಡಿಯಾದ್ದರಿಂದ ಇದು ಇವತ್ತು ಬಧುಕುವ ಸಾಧ್ಯತೆ ಇದೇ ಎಂದುಕೊಂಡು ಶರಟನ್ನ ಮೈಯಿಗೇರಿಸಿದೆ.

ಮೆಟ್ರೋ ರೈಲಿನಲ್ಲಿ ಕೂತು, ಪುಸ್ತಕ ಓದುತಿದ್ದ ನಾನು, ಓದಿದ ಒಂದು ವಾಕ್ಯವನ್ನು ಆನಂದಿಸುತ್ತಾ ಪುಸ್ತಕದಿಂದ ತಲೆಯೆತ್ತಿದೆ, ಎದುರಿಗೆ ಒಂದು ಹುಡುಗಿ, ಆಕೆಯ ಮುಖದ ಒಂದು ಬಾಗದಲ್ಲಿದ್ದ ದಟ್ಟವಾದ ಕೂದಲನ್ನು ಎರಡೂಕೈಯಿಂದ ಹಿಡಿದು ಏನೋ ಯೋಚನೆಯಲ್ಲಿ ಮುಳುಗಿದ್ದು ಕಣ್ಣಿಗೆ ಬಿತ್ತು, ಸರಿಯಾಗಿ ಅವಳ ಕೈಬೆರಳುಗಳನ್ನು ಗಮನಿಸಿದಾಗ, ಆಕೆ ತನ್ನ ಒಂದು ಕೂದಲನ್ನ ಸೀಳುತಿದ್ದಾಳೇನೋ ಎನಿಸಿತು, ಕೂದಲ ಸೀಳುವಿಕೆಯನ್ನು ನೆನೆಸಿಕೊಂಡ ನನಗೆ ನಗು ಬಂತು.

ಆಫೀಸಿನಲ್ಲಿ ತುಂಬಾ ಕೆಲಸವಿದ್ದುದರಿಂದ ಗುಂಡಿಯ ವಿಷಯ ಮರೆತೇ ಹೋಗಿತ್ತು, ಬೆಳಿಗ್ಗೆ ಮೀಟಿಂಗೊಂದನ್ನು ಮುಗಿಸಿ ಹೊರಬರುವಾಗ, ಆಕಸ್ಮಿಕವಾಗಿ ಕಣ್ಣು ಶರಟಿನ ಗುಂಡಿಯ ಮೇಲೆ ಹೋಯಿತು, ಗುಂಡಿಯನ್ನು ನೋಡಿ ಖುಶಿಯಾಯಿತು, ಭಲೇ ಇನ್ನೂ ಜೀವವಿದೇ ಈ ಗುಂಡಿಗೆ ಎಂದುಕೊಂಡು ಮತ್ತೆ ಕೆಲಸದಲ್ಲಿ ಮುಳುಗಿಹೋದೆ.

ಮಧ್ಯಾನ ಊಟಕ್ಕೆಂದು ಹೊರಗೆ ಹೋಗುತಿದ್ದಾಗ, ನನ್ನ ಮುಂದೆ ಒಬ್ಬ ತಂದೆ ತನ್ನ ಸುಮಾರು ಐದು ವರುಷದ ಮಗನನ್ನು ಹೆಗಲಮೇಲೆ ಕೂರಿಸಿಕೊಂಡು, ತನ್ನ ಮೂರು ವರುಷದ ಮಗಳನ್ನು ಕೈಹಿಡಿದು ನಡೆಸಿಕೊಂಡು ಹೋಗುತಿದ್ದರು, ನಾನು ಅವರನ್ನು ಇನ್ನೇನು ಹಿಂದೆ ಹಾಕಿ ಮುಂದೆ ಹೋಗಬೇಕೆನ್ನುವಾಗ, ತಂದೆ ನಿಂತು ಮಗನನ್ನು ಕೆಳಗೆ ಇಳಿಸಿ ಮಗಳನ್ನು ಹೆಗಲ ಮೇಲೆ ಕೂರಿಸಿಕೊಳ್ಳುತ್ತಿರುವುದು ಕಾಣಿಸಿತು. ನನಗಿರುವ ಒಬ್ಬಳೇ ಮಗಳು ನೆನಪಿಗೆ ಬಂದು ನಗು ಬಂತು.

ಮಧ್ಯಾನ ಊಟವಾದ ಮೇಲೆ, ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುತಿದ್ದಾಗ, ಶರಟಿನ ಮಧ್ಯದ ಭಾಗ ಮುಂದೆ ಬಂದು ಒಳಗಿನ ಬನಿಯನ್ ಕಾಣಿಸುತಿತ್ತು, ಗುಂಡಿ ಕಿತ್ತು ಹೋಗಿದೆ ಎಂಬ ಅರಿವು ಬಂದ ತಕ್ಷಣ, ನಾನು ಕುಳಿತಿದ್ದ ಕುರ್ಚಿಯ ಸುತ್ತಾಮುತ್ತಾ ನೋಡಿದೆ, ನನ್ನ ಟೇಬಲ್ ಕೆಳಗಡೆ ಬಗ್ಗಿ ನೋಡಿದೆ ಎಲ್ಲೂ ಗುಂಡಿ ಕಾಣಿಸಲಿಲ್ಲ, ನಾನು ಸಾಮಾನ್ಯ ನಡೆಯುವ ದಾರಿಗಳಲ್ಲೆಲ್ಲಾ ಹೋಗಿ ಬಂದೆ, ಎಲ್ಲೂ ಕಾಣಿಸಲಿಲ್ಲಾ. ಲಕ್ಷ್ಮೀ ನಾರಾಯಣ ಭಟ್ಟರ ಕವಿತೆ ನೆನಪಿಗೆ ಬಂತು, ಎಲ್ಲಿ ಜಾರಿತೋ ನನ್ನ ಗುಂಡಿ!! ಎಲ್ಲಿ ಅಲೆಯುತಿಹುದೋ ಎನೋ!! ಅಂತು ಬೆಳಿಗ್ಗೆ ಅನಿಸಿದಂತೆ ನನ್ನ ಪ್ರೀತಿಯ ಅಂಗಿಯ ಪ್ರೀತಿಯ ಗುಂಡಿ ಕಣ್ಮರೆಯಾಗಿತ್ತು,

Comments»

1. sunaath - July 31, 2008

ಜೀವನದಲ್ಲಿಯ ಸಣ್ಣ ಸಣ್ಣ ಘಟನೆಗಳಲ್ಲಿಯೇ ಜೀವನ ಅಡಗಿ ಕೂತುಕೊಂಡಿರುತ್ತದೆ, ಅಲ್ಲವೆ?

2. balaglobal - July 31, 2008

ನಿಮ್ಮ ಮಾತು ನೂರಕ್ಕೆ ನೂರು ನಿಜ.

ಧನ್ಯವಾದಗಳು
ಬಾಲ.

3. ravindra - October 1, 2008

chennagide. . .

4. balaglobal - October 1, 2008

ರವೀಂದ್ರ ಅವರೇ,
ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು
-ಬಾಲ